ಕರಾವಳಿ

ಮಂಗಳೂರು ಜೈಲಿನಲ್ಲಿರುವ ಖೈದಿ (ಪ್ರಿಯಕರ)ಗೆ ಗಾಂಜಾ ಪೂರೈಕೆ ಮಾಡಲು ಬಂದ ವಿದ್ಯಾರ್ಥಿನಿ (ಪ್ರೇಯಸಿ) ರೆಡ್‌ಹ್ಯಾಂಡ್ ಆಗಿ ಸೆರೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ; ನಗರದ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಭೇಟಿ ನೀಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡಲು ಬಂದ ಖೈದಿಯ ಪ್ರೇಯಸಿ ಎನ್ನಲಾದ ವಿದ್ಯಾರ್ಥಿನಿಯೋರ್ವಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡಿದಿದ್ದಾರೆ.

ದಿನಾಂಕ: 11-10-2018 ರಂದು ಮಂಗಳೂರು ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಭೇಟಿ ನೀಡುವ ಸಮಯದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುವಾದ ಗಾಂಜಾವನ್ನು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ನಗರದ ಕಾಲೇಜೊಂದರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯಾಗಿರುವ ಈಕೆ ತನ್ನ ಕಾಲೇಜಿನ ಗುರುತಿನ (ಐಡಿ ಕಾರ್ಡ್) ಚೀಟಿಯನ್ನು ತೋರಿಸಿ ಕಾರಾಗೃಹದಲ್ಲಿ ವಿಚಾರಣಾಧೀಣ ಖೈದಿಯಾಗಿದ್ದ ಮುಸ್ತಾಫ ಎಂಬಾತನಿಗೆ ಗಾಂಜಾವನ್ನು ಪೂರೈಕೆ ಮಾಡಲು ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಯುವತಿಯನ್ನು ಗಾಂಜಾ ಸಹಿತಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಯುವತಿಯಿಂದ 20 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

2016ರಲ್ಲಿ ವಾಮಂಜೂರಿನಲ್ಲಿ ನಡೆದ ಚರಣ್ ಕೊಲೆ ಪ್ರಕರಣದ ಐವರು ಆರೋಪಿಗಳಲ್ಲಿ ಮುಸ್ತಾಫ್ ಒಬ್ಬನಾಗಿದ್ದು, ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ. ವರ್ಷದ ಹಿಂದೆ ಬಿಡುಗಡೆಯಾಗಿದ್ದು, ಬಳಿಕ ಎರಡು ತಿಂಗಳ ಹಿಂದೆ ಖಾಲಿದ್ ಕೊಲೆ ಯತ್ನ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದ.

ಯುವತಿಯ ಗಾಂಜಾ ಪೂರೈಕೆ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯುವತಿಗೆ ಗಾಂಜಾವನ್ನು ನೀಡಿದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಮತ್ತು ಬರ್ಕೆ ಪೊಲೀಸ್ ಠಾಣಾ ಪಿಎಸ್ಐ ಶೋಭಾ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.