ಮಂಗಳೂರು, ಅಕ್ಟೋಬರ್.11: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ “ಅತ್ಯಂತ ತೀವ್ರ ಚಂಡಮಾರುತ” ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಪರಿಣಾಮ ಕರಾವಳಿ ಭಾಗದಲ್ಲಿ ಕಡಲಬ್ಬರ ಹೆಚ್ಚಾಗಿದೆ. ಹೀಗಾಗಿ ಕಡಲ ಕಿನಾರೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಿರುವಂತೆ ಸೂಚಿಸಲಾಗಿದೆ.
ತೀವ್ರ ಸ್ವರೂಪ ಪಡೆದುಕೊಂಡಿರುವ ಚಂಡಮಾರುತ ಗಂಟೆಗೆ 165 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು, ಒಡಿಶಾ ರಾಜ್ಯ ತತ್ತರಿಸುವಂತೆ ಮಾಡಿದೆ. ಹಲವು ಕಡೆಗಳಲ್ಲಿ ವ್ಯಾಪಕ ಭೂಕುಸಿತಗಳು ಸಂಭವಿಸಿದ್ದು, ಕರಾವಳಿಯ ಐದು ಜಿಲ್ಲೆಗಳ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಚಂಡಮಾರುತು ಕರ್ನಾಟಕ ಕರಾವಳಿಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಚಂಡಮಾರುತದ ಪ್ರಭಾವ ಪಶ್ಚಿಮ ಕರಾವಳಿಯ ಮೇಲೂ ಆಗಿದ್ದು, ಮಂಗಳೂರಿನ ವಿವಿಧ ಕಡಲ ಕಿನಾರೆಯಲ್ಲಿ ನಿನ್ನೆ ಬೆಳಗ್ಗಿನ ಜಾವದಿಂದ ಸಮುದ್ರದಲ್ಲಿ ಅಲೆಗಳು ತೀರಾ ಹೆಚ್ಚೇ ಎನ್ನುವಂತೆ ಆರ್ಭಟಿಸಿವೆ.
ಬುಧವಾರ ಬೆಳಗ್ಗಿನಿಂದಲೇ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಕಡಲಿನ ಅಬ್ಬರ ಮಿತಿ ಮೀರಿದೆ. ಈ ಹಿಂದೆ ಎಂದೂ ಕೂಡಾ ಕಂಡರಿಯದಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿದೆ. ಸಮುದ್ರದ ಅಲೆಗಳು ಭಾರೀ ಎತ್ತರಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರರು ಭಯಭೀತಿಗೊಂಡು ಸಮುದ್ರಕ್ಕಿಳಿಯಲಿಲ್ಲ ಎಂದು ತಿಳಿದು ಬಂದಿದೆ.
ಅಲೆಗಳ ಬೋರ್ಗರೆತಕ್ಕೆ ಮಂಗಳೂರು ಹೊರವಲಯದಲ್ಲಿರುವ ಪಣಂಬೂರು ಪ್ರವಾಸಿ ತಾಣದ ಅಂಗಡಿಗಳಿಗೆ ನೀರು ನುಗ್ಗಿದ್ದು, ಬೀಚ್ ನೋಡಲು ಬರುವ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಬು ಅ.13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಸಮುದ್ರದ ದಡದ ಮರಳು ಸೀಳುವ ಮಾದರಿಯಲ್ಲಿ ಅಲೆಗಳ ಅಬ್ಬರಿಸಿದ್ದು, ಸೋಮೇಶ್ವರ, ಉಳ್ಳಾಲ, ಉಚ್ಚಿಲ ಹೀಗೆ ಹಲವು ಪ್ರದೇಶದ ಕಡಲ ತೀರದಲ್ಲಿ ಸಮುದ್ರದ ಅಲೆಗಳು ಅಪಾಯದ ಮಟ್ಟದಲ್ಲಿ ದಡಕ್ಕೆ ಅಪ್ಪಳಿಸಿವೆ. ಸಮುದ್ರದ ದಡದಲ್ಲಿರುವ ರಸ್ತೆ ದಾಟಿ ನೀರು ಮನೆಗಳ ಬಳಿಗೆ ಬಂದಿದ್ದು, ಕಾವಲು ಪಡೆಯನ್ನು ಕೂಡ ಅಲ್ಲಿ ನಿಯೋಜಿಸಲಾಗಿದೆ. ಸೋಮೇಶ್ವರ ಉಚ್ಚಿಲ ಸಮೀಪದ ಪೆರಿಬೈಲ್ನಲ್ಲಿ ಕಡಲಿನ ಅಲೆಗಳು ಸಮುದ್ರ ಪಕ್ಕದ ರಸ್ತೆಯನ್ನೂ ದಾಟಿ ಮುನ್ನುಗ್ಗಿವೆ. ಅಲ್ಲದೆ ನಾಲ್ಕೈದು ಮನೆಯೊಳಗೆ ನೀರು ನುಗ್ಗಿವೆ. ಈ ಅನಿರೀಕ್ಷಿತ ಘಟನೆಯಿಂದ ಸ್ಥಳೀಯರು ಆತಂಕಿತರಾಗಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ.
ಚಂಡಮಾರುತ ಅರಬ್ಭೀ ಸಮುದ್ರದ ಪಶ್ಚಿಮ ಕೇಂದ್ರ ಭಾಗದಲ್ಲಿ ಹಾಗೂ ನೈರುತ್ಯದಲ್ಲಿ ಗಂಟೆಗೆ 800 ಕಿಲೋಮೀಟರ್ ವೇಗದಲ್ಲಿ, ಪೂರ್ವದಲ್ಲಿ ಗಂಟೆಗೆ 650 ಕಿಲೋಮೀಟರ್ ವೇಗದಲ್ಲಿ, ಆಗ್ನೇಯದಲ್ಲಿ ಗಂಟೆಗೆ 940 ಕಿಲೋಮೀಟರ್ ವೇಗವಾಗಿ ಗಾಳಿ ಬೀಸುತ್ತೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.
Comments are closed.