ಕರಾವಳಿ

ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

Pinterest LinkedIn Tumblr

ಮಂಗಳೂರು : ನಗರದ ಶೃದ್ಧಾ ಭಕ್ತಿಯ ಕ್ಷೇತ್ರವಾದ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬುಧವಾರದಿಂದ ನವರಾತ್ರಿ ಸಂಭ್ರಮ ಅರಂಭಗೊಂಡಿದೆ.ಸರ್ವರಿಗೂ ಮಂಗಳವನ್ನು ದಯಪಾಲಿಸುವ ಮಂಗಳಾಂಬಿಕೆಯನ್ನು ತುಳುನಾಡಿನಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತದೆ.

ತುಳುನಾಡಿನ ಸರ್ವ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಮಂಗಳಾದೇವಿಯಲ್ಲಿ ತಾಯಿ ಮಂಗಳಾಂಬಿಕೆ ಪೌರಾಣಿಕ ಇತಿಹಾಸದ ಜೊತೆಗೆ ತುಳುನಾಡಿನ ಶಕ್ತಿಯ ದೇವತೆಯಾಗಿ ನೆಲೆಯೂರಿದ್ದಾಳೆ.ಅಮ್ಮ ಎಂದು ನೊಂದು ಬರುವ ಭಕ್ತರಿಗೆ ತಾಯಿಯ ರೂಪದಲ್ಲಿ ಅನುಗ್ರಹವನ್ನು ನೀಡಿ ಕಷ್ಟವನ್ನೆಲ್ಲಾ ದೂರ ಮಾಡುತ್ತಾಳೆ ಎಂಬ ಅಚಲ ನಂಬಿಕೆ ಭಕ್ತರದ್ದು.

ಸಾಮಾನ್ಯವಾಗಿ ನವರಾತ್ರಿಯ ಸಂದರ್ಭ ಎಲ್ಲ ದೇವಿ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಮಂಗಳೂರಿನ ಮಂಗಳಾದೇವಿ ದೇವಾಲಯದಲ್ಲೂ ಈ ಒಂಭತ್ತು ದಿನಗಳದಂದು ಅತ್ಯಂತ ಮಹತ್ವಪೂರ್ಣವಾದ ದಿನವಾಗಿದ್ದು, ತಾಯಿ ಮಂಗಳಾಂಬಿಕೆಯನ್ನು ವಿವಿಧ ಅವತಾರಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ.

ಬಿಂಬರೂಪದ ಲಿಂಗದಲ್ಲಿ ಜಗದಾಂಬೆಯನ್ನು ಪೂಜಿಸುವುದು ಇಲ್ಲಿನ ವಿಶೇಷತೆಯಾಗಿದ್ದು, ಈ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲನೇ ದಿನದಂದು ದೇವಿಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಮೊದಲನೆಯ ದಿನ ಶೈಲಪುತ್ರಿಯಾಗಿ,ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರಘಂಟಿ, ನಾಲ್ಕನೆಯ ದಿನ ಕೋಶ್ಮಾಂಡಿ, ಐದನೆಯ ದಿನ ಸ್ಕಂದ ಮಾತಾ ಆರನೆಯ ದಿನ ಕಾತ್ಯಾಯಿನಿ, ಏಳನೇ ದಿನದಂದು ಚಂಡಿಕೆಯಾಗಿ, ಎಂಟನೇ ದಿನದಂದು ಮಹಾಸರಸ್ವತಿಯಾಗಿ ಪೂಜಿಸಲ್ಪಡುತ್ತಾಳೆ.

ಮಹಾನವಮಿಯಂದು ವಾಗ್ದೇವಿಯಾಗಿ ಪೂಜಿಸಲ್ಪಡುತ್ತಾಳೆ. ಅಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ದೇವೀ ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದು, ದೇವೀ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ನಡೆಸಲಾಗುತ್ತದೆ. ದೇವಿಯ ಎಲ್ಲಾ ಶಸ್ತ್ರಾಸ್ತ್ರಗಳನ್ನು ಅಂದು ಪೂಜಿಸಲಾಗುತ್ತದೆ. ಚಂಡಿಕಾಯಾಗವೂ ನಡೆಯುತ್ತದೆ. ಹತ್ತನೆಯ ದಿನದಂದು ಮಾಹಾರಥೋತ್ಸವ ನಡೆಯುತ್ತದೆ ಹಾಗು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ.

Comments are closed.