ಕರಾವಳಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ : ಶಾರದಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು,ಅಕ್ಟೋಬರ್.10: ನವರಾತ್ರಿ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮಗಳು ಅಕ್ಟೋಬರ್ 10ರಿಂದ ಆರಂಭಗೊಂಡಿದ್ದು, ಇಂದು ಬೆಳಗ್ಗೆ 8:30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪ್ರತಿಷ್ಟಾಪನಾ ಪೂಜೆ ಆರಂಭಗೊಂಡಿದ್ದು, ಮಹಾಗಣಪತಿ, ನವದುರ್ಗೆಯರ ಸಹಿತಾ ಶಾರದಮಾತೆಯ ಪ್ರತಿಷ್ಠಾಪನೆಯ ಬಳಿಕ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಅವರು ದೀಪ ಬೆಳಗುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಶುಭಾ ಹಾರೈಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಅವರು, ಅಕ್ಟೋಬರ್.10 ರಿಂದ 20ರವರೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವ ವೈಭವದಿಂದ ನಡೆಲಿದೆ.

ಅ.14ರಂದು ಸಂಜೆ 6ಗಂಟೆಗೆ ‘ಮಂಗಳೂರು ದಸರಾ’ವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌.ಭೋಜೇಗೌಡ, ಹರೀಶ್‌ ಕುಮಾರ್, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಭಾಸ್ಕರ್‌, ಮಾಜಿ ಶಾಸಕ ಜೆ.ಆರ್‌. ಲೋಬೊ ಸೇರಿದಂತೆ ಸಚಿವರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಹೇಳಿದರು.

ಶ್ರೀ ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. (ಆಡ್ವಕೇಟ್) ಅವರು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಇಂದಿನಿಂದ 20-10-2018ರವರೆಗೆ ಪ್ರತೀ ದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಮಹಾ ಪೂಜೆಗಳು ನಡೆಯಲಿರುವುದು.ಅಕ್ಟೋಬರ್. 17ರಂದು ಬೆಳಗ್ಗೆ 10 ಗಂಟೆಗೆ ಚಂಡಿಕಾ ಹೋಮ, ಹಗಲು ಉತ್ಸವ ಜರಗಲಿದೆ. ಉತ್ಸವದ ಸಂದರ್ಭ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ನೇತ್ರತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅ.19ರಂದು ಸಂಜೆ 4 ಗಂಟೆಗೆ ಶೋಭಾಯಾತ್ರೆ:

ಅ.19ರಂದು ಸಂಜೆ 4 ಗಂಟೆಗೆ ‘ಮಂಗಳೂರು ದಸರಾ’ದ ಶಾರದಾ ಮಾತೆಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಮೆರವಣಿಗೆಯಲ್ಲಿ ಹುಲಿವೇಷ ತಂಡಗಳು, 75ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರುಗು ನೀಡಲಿವೆ‌. ಅಲ್ಲದೆ ಕಂಸಾಳೆ, ಗೊಂಬೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಚಂಡೆ ಮುಂತಾದ ನೂರಕ್ಕೂ ಅಧಿಕ ಕಲಾತಂಡಗಳು ಮೆರವಣಿಯಲ್ಲಿ ಪ್ರದರ್ಶನ ನೀಡಲಿವೆ.

ಶೋಭಾಯಾತ್ರೆ ಕುದ್ರೋಳಿ ದೇವಸ್ಥಾನದಿಂದ ಹೊರಟು ಲೇಡಿಹಿಲ್‌, ಬಲ್ಲಾಳ್‌ಬಾಗ್‌, ಕೊಡಿಯಾಲ್‌ ಬೈಲ್‌, ಹಂಪನಕಟ್ಟೆ, ವಿ.ವಿ. ಕಾಲೇಜು, ಗಣಪತಿ ಹೈಸ್ಕೂಲ್‌ ರಸ್ತೆ, ರಥಬೀದಿ, ನ್ಯೂಚಿತ್ರ ಮಾರ್ಗವಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಬಂದು ಪುಷ್ಕರಣಿಯಲ್ಲಿ ವಿಸರ್ಜನೆಗೊಳ್ಳಲಿದೆ.

ಶ್ರೀ ಕ್ಷೇತ್ರದ ಉಪಾಧ್ಯಕ್ಷ ರಾಘವೇಂದ್ರ ಕೂಳೂರು ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಹ ಅಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್, ಸದಸ್ಯರಾದ ಬಿ.ಕೆ. ತಾರನಾಥ್‌, ರವಿಶಂಕರ್‌ ಮಿಜಾರ್, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಚಿತ್ತರಂಜನ್‌ ಗರೋಡಿ, ಡಿ.ಡಿ. ಕಟ್ಟೆಮಾರ್‌, ಡಾ.ಅನಸೂಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

Comments are closed.