ಕರಾವಳಿ

ಮಂಗಳೂರು ಸಿಸಿಬಿ ಕಾರ್ಯಾಚರಣೆ : ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳನ ಸೆರೆ – ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು : ಮಂಗಳೂರು ನಗರದ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳನನ್ನು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣ ಹಾಗೂ ಸರಕಳ್ಳತನ ಮಾಡಲು ಉಪಯೋಗಿಸಿದ ಕಾರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಸುರತ್ಕಲ್ ಸಮೀಪದ ಕಾಟಿಪಳ್ಳ ಈದ್ಗಾ ಮಸೀದಿ ಬಳಿಯ 2ನೇ ಬ್ಲಾಕ್ ನಿವಾಸಿ ಶಾಕೀಬ್ ಯಾನೆ ಸಬ್ಬು (25) ಎಂದು ಗುರುತಿಸಲಾಗಿದೆ. ಆರೋಪಿಯಿಂದ 6.60 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಮಾರುತಿ ರಿಡ್ಜ್ ಕಾರಿನಲ್ಲಿ ಬಂದು ಸರಕಳ್ಳತನ ಮಾಡುವ ಆರೋಪಿಗಳು ಮಂಗಳೂರು ನಗರದ ವಾಮಂಜೂರು ಪರಿಸರದಲ್ಲಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾರುತಿ ರಿಡ್ಜ್ ಕಾರನ್ನು ಬೆನ್ನಟ್ಟಿ ಹಿಡಿದು ಈ ಕಾರಿನಲ್ಲಿದ್ದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ವಿಚಾರಿಸಿದಾಗ ಆತನು ಚಲಾಯಿಸುತ್ತಿದ್ದ ಕೆಎ-19-ಎಂಎ-4807 ನೇ ಕಾರಿನಲ್ಲಿ ಆತನ ಸಹಚರರೊಂದಿಗೆ ಸರಕಳ್ಳತನ ಮಾಡಿರುವುದುದಾಗಿ ಒಪ್ಪಿಕೊಂಡಿರುವುದಲ್ಲದೇ ಮಂಗಳೂರು ನಗರ ಕಮೀಷನರೇಟ್ ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಕಾರು ಹಾಗೂ ಬೈಕ್‌ಗಳಲ್ಲಿ ಬಂದು ಅಮಾಯಕ ವಯಸ್ಕರ ಹಾಗೂ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಹಾಗೂ ಕರಿಮಣಿ ಸರಗಳನ್ನು ಸುಲಿಗೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಆರೋಪಿ ತನ್ನ ಸಹಚರರೊಂದಿಗೆ ಕಾರು ಹಾಗೂ ಬೈಕ್ ಗಳಲ್ಲಿ ಬಂದು ಅಮಾಯಕ ವಯಸ್ಕರ ಹಾಗೂ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಹಾಗೂ ಕರಿಮಣಿ ಸರಗಳನ್ನು ಸುಲಿಗೆ ಮಾಡಿದ್ದು, ಸುಲಿಗೆ ಮಾಡಿದ 140 ಗ್ರಾಂ ತೂಕದ ಒಟ್ಟು 5 ಚಿನ್ನದ ಸರ, ಒಂದು ಕರಿಮಣಿ ಸರ, 2 ಚಿನ್ನದ ಪೆಂಡೆಂಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 4,15,000/- ಆಗಿರುತ್ತದೆ. ಅಲ್ಲದೇ ಆರೋಪಿಯ ವಶದಿಂದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಉಪಯೋಗಿಸಿದ ಮಾರುತಿ ರಿಡ್ಜ್ ಕಾರು, 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 6,60,000/ ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿ ವಿರುದ್ಧ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಮೂಡುಬಿದಿರೆ, ಶಿರ್ವಾದಲ್ಲಿ ತಲಾ ಒಂದರಂತೆ ಚಿನ್ನಾಭರಣ ಕಳವು ಪ್ರಕರಣಗಳು ದಾಖಲಾಗಿವೆ. ಆರೋಪಿ ಶಾಕಿಬ್ ಜೊತೆಯಲ್ಲಿ ಈ ಸರಕಳ್ಳತನ ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ಶಾಕಿಬ್ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕಳ್ಳತನಕ್ಕೆ ಸಂಬಂಧಪಟ್ಟಂತೆ 6 ಪ್ರಕರಣಗಳು, ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿವೆ. ಆರೋಪಿಯನ್ನು ಹಾಗೂ ವಶಪಡಿಸಿ ಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್‌ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.