ಕರಾವಳಿ

ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅಧಿಕಾರ ಸ್ವೀಕಾರ :ಇಟಾಲಿಯನ್, ಕೊಂಕಣಿ,ಆಂಗ್ಲ ಭಾಷೆಯ ಜೊತೆ ತುಳು,ಕನ್ನಡದಲ್ಲಿ ಸಂದೇಶ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 15: ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರ ದೀಕ್ಷೆ ಹಾಗೂ ಪಟ್ಟಾಬಿಷೇಕ ಕಾರ್ಯಕ್ರಮ ನಗರದ ಪುರಾತನ ರೊಝಾರಿಯೋ ಕೆಥಡ್ರಲ್ ನಲ್ಲಿ ಶನಿವಾರ ನಡೆಯಿತು.

ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 22 ವರ್ಷಗಳ‌ ಬಳಿಕ ನಡೆದ ಈ ಐತಿಹಾಸಿಕ ಸಮಾರಂಭದಲ್ಲಿ ಬೆಂಗಳೂರು, ಗೋವಾದ ಆರ್ಚ್ ಬಿಷಪ್ ಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಿಷಪ್ ಗಳು, ನೂರಾರು ಧರ್ಮ ಗುರುಗಳು, ಧರ್ಮ ಭಗಿನಿಯರು, ಸಹಸ್ರಾರು ಕ್ರೈಸ್ತ ಬಾಂಧವರು, ಗಣ್ಯರು, ಸಾರ್ವಜನಿಕರ ಸಮ್ಮುಖದಲ್ಲಿ ಮಂಗಳೂರು ಕ್ರೈಸ್ತ ಧರ್ಮ‌ಪ್ರಾಂತ್ಯದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ಅಧಿಕಾರ ಸ್ವೀಕರಿಸಿದರು.‌

ವಿಶೇಷ ಬಲಿಪೂಜೆ ಸಹಿತ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ನೂತನ ಬಿಷಪ್ ಗೆ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ವೇದಿಕೆಯಲ್ಲಿದ್ದ ಆರ್ಚ್ ಬಿಷಪ್ ಗಳು ಮತ್ತು ಬಿಷಪರು ದೀಕ್ಷೆ ವಿಧಿ ವಿಧಾನ ನೆರವೇರಿಸಿದರು.

ರೋಮ್ ನ ಪೋಪ್ ಪ್ರತಿನಿಧಿ ಮೊನ್ಸಿಂಜರ್ ಝೇವಿಯರ್ ಡಿ. ಫೆರ್ನಾಂಡಿಸ್ ರವರು ಬಿಷಪ್ ನೇಮಕಾತಿಯ ಲ್ಯಾಟಿನ್ ಭಾಷೆಯ ಆದೇಶ ಪತ್ರ ವಾಚಿಸಿದರು. ಫಾ. ಜೋಸೆಫ್ ಮಾರ್ಟಿನ್ ಇಂಗ್ಲಿಷ್ ನಲ್ಲಿ, ಫಾ. ವಿಕ್ಟರ್ ಡಿಮೆಲ್ಲೊ ಕೊಂಕಣಿಯಲ್ಲಿ ಆದೇಶವನ್ನು ಭಾಷಾಂತರಿಸಿದರು.

ನಗರದ ರೊಸಾರಿಯೊ ಕೆಥಡ್ರಲ್‌ನ ಹೊರಾಂಗಣದ ಬೃಹತ್ ವೇದಿಕೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು, ಗೋವಾದ ಆರ್ಚ್‌ ಬಿಷಪ್‌ಗಳು, ವಿವಿಧೆಡೆಯ ಬಿಷಪರು, ಧರ್ಮಗುರುಗಳು, ಧರ್ಮ ಭಗಿನಿಯರು, ಕ್ರೈಸ್ತ ಬಾಂಧವರು, ಗಣ್ಯರು ಸೇರಿದಂತೆ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ದೀಕ್ಷೆ ಸ್ವೀಕರಿಸಿದ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರು, ಕನ್ನಡ, ತುಳು, ಇಟಾಲಿಯನ್, ಕೊಂಕಣಿ ಹಾಗೂ ಆಂಗ್ಲ ಭಾಷೆಯಲ್ಲಿ ಸಂದೇಶ ನೀಡಿದರು.

ನೂತನ ಬಿಷಪ್‌ರಿಂದ ಕನ್ನಡ, ತುಳು, ಇಟಾಲಿಯನ್, ಕೊಂಕಣಿ ಹಾಗೂ ಆಂಗ್ಲ ಭಾಷೆಯಲ್ಲಿ ಸಂದೇಶ:

ಕುಡ್ಲದಲ್ಲಿ ಒಂದೇ ಮಾನವ ಕುಲದಲ್ಲಿ ಹುಟ್ಟಿದ ನಾವೆಲ್ಲರೂ ಒಂದಾಗಿ ಜೀವಿಸುತ್ತಿದ್ದೇವೆ. ಸಹೋದರ, ಸಹೋದರಿಯರಂತೆ ನಾವೆಲ್ಲಾ ಒಂದಾಗಿ ಬದುಕುತ್ತಿರುವವರು. ಇದರ ಜತೆಯಲ್ಲೇ ನಾವು ಧರ್ಮಗಳ ಗೋಡೆಯನ್ನು ತಗ್ಗಿಸಿ ಮಾನವ ಧರ್ಮವೆಂಬ ಗೋಡೆಯನ್ನು ಎತ್ತರಿಸಿ ಪ್ರೀತಿಯಿಂದ ಜೀವಿಸೋಣ ಎಂದು ದೀಕ್ಷೆ ಸ್ವೀಕರಿಸಿದ ಬಳಿಕ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ತುಳುವಿನಲ್ಲಿ ಸಂದೇಶ ನೀಡಿದರು.

ದೇವರ ಅನುಗ್ರಹ ಪ್ರತಿಯೊಬ್ಬರಲ್ಲೂ ಕಾರ್ಯನಿತರವಾಗಿದೆ ಹಾಗೂ ದೇವರ ಆತ್ಮ ಬೇರೆ ಬೇರೆ ಧರ್ಮ ಸಂಪ್ರದಾಯದವರಾದ ನಮ್ಮನೆಲ್ಲಾ ಒಟ್ಟುಗೂಡಿಸಿದೆ. ಸಾವಿಗಿಂತ ಪ್ರೀತಿ ಹೆಚ್ಚು ಶಕ್ತಿಶಾಲಿ. ಪ್ರೀತಿ ಎಲ್ಲ ಸಿದ್ಧಾಂತಗಳಿಗಿಂತ ಉತ್ತಮವಾದದ್ದು ಹಾಗೂ ಬೇರ್ಪಡಿಸುವ ಎಲ್ಲ ಗೋಡೆಗಳಿಗಿಂತ ಎತ್ತರವಾದುದು ಎಂದು ಕನ್ನದಲ್ಲಿ ಅವರು ಸಂದೇಶ ನೀಡಿದರು.

ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ,ಶಿಸ್ತುಬದ್ಧ ಹಾಗೂ ಸ್ವಚ್ಛತೆಯೊಂದಿಗೆ ನಡೆದ ಕಾರ್ಯಕ್ರಮ :

ನೂತನ ಬಿಷಪರ ದೀಕ್ಷೆಯ ನಿಮಿತ್ತ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳು ಸೇರಿದಂತೆ ಮಧ್ಯಾಹ್ನ ಸುಮಾರು 2 ಗಂಟೆಯವರೆಗೆ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಬಿಳಿ ವಸ್ತ್ರಧಾರಿಗಳಾಗಿದ್ದ ನೂರಾರು ಕಾರ್ಯಕರ್ತರು ಅತ್ಯಂತ ಶಿಸ್ತುಬದ್ಧ ಹಾಗೂ ಸ್ವಚ್ಛತೆಯೊಂದಿಗೆ ಕಾರ್ಯಕ್ರಮ ನಡೆಸಲು ಸಹಕರಿಸಿದರು.

ಸಾವಿರಾರು ಜನರು ಸೇರಿದ್ದರೂ ಯಾವುದೇ ಗೊಂದಲವಿಲ್ಲದೆ ಕಾರ್ಯಕ್ರಮ ನಡೆಸುವಲ್ಲಿ ಪೊಲೀಸರು ಕೂಡಾ ಸಹಕರಿಸಿದರು. ಉಪಹಾರ, ಪಾನೀಯ ಹಾಗೂ ಊಟದ ವ್ಯವಸ್ಥೆಯನ್ನು ಕೂಡಾ ಸ್ವಯಂ ಸೇಕರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ರವಿವಾರ ನೂತನ ಬಿಷಪ್‌ರಿಂದ ಪ್ರಥಮ ಬಲಿಪೂಜೆ ;

ರವಿವಾರ ಬೆಳಗ್ಗೆ 8 ಗಂಟೆಗೆ ರೊಸಾರಿಯೊ ಕೆಥಡ್ರಲ್‌ನಲ್ಲಿ ನೂತನ ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ಡಾನರಿಂದ ಪ್ರಥಮ ಬಲಿಪೂಜೆ ನಡೆಯಲಿದೆ.

Comments are closed.