ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರ ನೇಮಕಕ್ಕೆ ಚಿಂತನೆ : ಎಡಿಜಿಪಿ ಕಮಲ್ ಪಂತ್

Pinterest LinkedIn Tumblr

ಮಂಗಳೂರು,ಆಗಸ್ಟ್, 31 : ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಗಳೂರು ಮಾದರಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕ(ಎಡಿಜಿಪಿ) ಕಮಲ್ ಪಂತ್ ತಿಳಿಸಿದ್ದಾರೆ.

ಗುರುವಾರ ಮಂಗಳೂರಿಗೆ ಆಗಮಿಸಿದ ಅವರು, ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ಸೂಕ್ಷ್ಮ ಪ್ರದೇಶವಾಗಿದ್ದು, ಈ ಭಾಗಕ್ಕೆ ಹೆಚ್ಚುವರಿ ಪೊಲೀಸ ಪಡೆಯ ಆವಶ್ಯಕತೆ ಇರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಈಗಾಗಲೇ ಧರ್ಮವೀರ ಕಮಿಟಿಯ ವರದಿ ರಾಜ್ಯದ ಎಲ್ಲಾ ಠಾಣೆಗಳಿಗೆ ಹೆಚ್ಚುವರಿ ಪೊಲೀಸರನ್ನು ಒದಗಿಸಲು ಶಿಫಾರಸು ಮಾಡಿದೆ. ಆದರೆ ಒಮ್ಮೆಲೆ ಅದನ್ನು ಜಾರಿ ಮಾಡುವುದು ಸಾಧ್ಯವಾಗದು. ಕರಾವಳಿ ಜಿಲ್ಲೆಗಳಿಗೆ ಆದ್ಯತೆಯ ಮೇಲೆ ಹೆಚ್ಚು ಪೊಲೀಸರನ್ನು ಒದಗಿಸ ಬೇಕೆಂಬ ಬೇಡಿಕೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರಾವಳಿ ಜಿಲ್ಲೆಗಳ ಬೇಡಿಕೆಯನ್ನು ಪರಿಗಣಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.

ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ|ಜಿ. ಪರಮೇಶ್ವರ್ ಭಟ್ಕಳಕ್ಕೆ ಭೇಟಿ ನೀಡಿದಾಗ ಈ ವಿಚಾರ ಚರ್ಚೆಗೆ ಬಂದಿದೆ. ಮೊದಲಿಗೆ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಠಾಣೆಗೊಬ್ಬರು ಇನ್‌ಸ್ಪೆಕ್ಟರ್ ನೇಮಕ ಮತ್ತು ಸಾಕಷ್ಟು ಪೊಲೀಸ್ ಸಿಬಂದಿಯನ್ನು ಒದಗಿಸಿ ಪೊಲೀಸ್ ಠಾಣೆಗಳನ್ನು ಬಲ ಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಮಲ್ ಪಂತ್ ವಿವರಿಸಿದರು.

ರಾಜ್ಯದ ಪೊಲೀಸ್ ಠಾಣೆಗಳು ಮತ್ತು ಅಲ್ಲಿ ಇರಬೇಕಾದ ಪೊಲೀಸ್ ಸಿಬಂದಿಯ ಪ್ರಮಾಣಕ್ಕೆ ಸಂಬಂಧಿಸಿದ ಮಾನದಂಡಗಳು ಹಳೆಯವು. ಗತ ೧೮ ವರ್ಷಗಳಿಂದ ಅವುಗಳನ್ನು ಪರಿಷ್ಕರಿಸಲಾಗಿಲ್ಲ. ಈ ೧೮ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸಾಮಾಜಿಕ ಬದಲಾವಣೆಗಳೊಂದಿಗೆ ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗಿದೆ. ಅದಕ್ಕೆ ಅನುಗುಣವಾಗಿ ಸಾಕಷ್ಟು ಸಿಬಂದಿ ಒದಗಿಸಿ ಪೊಲೀಸ್ ಠಾಣೆಗಳನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎಂದು ಎಡಿಜಿಪಿ ನುಡಿದರು.

ಮಂಗಳೂರಿನಲ್ಲಿ ಶಾಂತಿಯುತ ಪರಿಸ್ಥಿತಿ ಇದೆ. ಬುಧವಾರ ಓ‌ಎನ್‌ಜಿಸಿ-ಎಂಆರ್‌ಪಿ‌ಎಲ್ ಪ್ರಾಯೋಜನೆಯಲ್ಲಿ ತೈಲ ಕಂಪೆನಿಗಳ ಭದ್ರತಾ ಸಭೆ ಜರಗಿದೆ. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದಿದೆ. ತೈಲ ಕಂಪೆನಿಗಳ ಭದ್ರತೆಯ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ಕೇಂದ್ರ ಸರಕಾರ ಕಾವಲುಗಾರರನ್ನು ಮಾತ್ರ ಒದಗಿಸುತ್ತದೆ. ಮುಂದೆ ೬ ತಿಂಗಳಿಗೊಮ್ಮೆ ಇಂತಹ ಸಭೆ ನಡೆಯಲಿದೆ ಎಂದು ಎಡಿಜಿಪಿ ತಿಳಿಸಿದರು.

ಡ್ರಗ್ಸ್ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ :

ದ.ಕ.ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ ಎನ್ನಲಾದ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಇಲಾಖೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಗೃಹ ಸಚಿವರು ಕೂಡಾ ಪಿಡುಗನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಎಡಿಜಿಪಿ ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ರವಿಕಾಂತೇ ಗೌಡ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.