ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಸಾರ್ವಕಾಲಿಕ ಹಾಗೂ ಸಮಾಜಕ್ಕೆ ದಿಕ್ಷೂಚಿ :ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಜರಗಿತು.

ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶಗಳು ಸಾರ್ವಕಾಲಿಕ. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸುಂದರ ಸಮಾಜ ನಿರ್ಮಾಣವಾಗಲಿದೆ. ನಾರಾಯಣ ಗುರುಗಳು ಎಲ್ಲ ವರ್ಗಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ಅಸ್ಪಶ್ಯತೆಯನ್ನು ಹೋಗಲಾಡಿಸಲು ನಾರಾಯಣ ಗುರುಗಳು ಅವಿರತವಾಗಿ ಶ್ರಮಿಸಿದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆ ನಿಟ್ಟಿನಲ್ಲಿ ದಕ್ಷಿಣ ಭಾರತಕ್ಕೆ ಬೆಳಕು ಕೊಟ್ಟ ದಾರ್ಶನಿಕರು.ಅವರ ಸಂದೇಶ ಸಾರ್ವಕಾಲಿಕವಾದದ್ದು ಹಾಗೂ ಸಮಾಜಕ್ಕೆ ದಿಕ್ಷೂಚಿ ಎಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದ ಸಂತ ಅಲೋಶಿಯಸ್ ಪಿಯು ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಅವರು, ಇನ್ನೂ ದೇವಸ್ಥಾನಗಳನ್ನು ಸ್ಥಾಪಿಸುವ ಅಗತ್ಯವಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ನಾರಾಯಣ ಗುರು ಹೇಳುವ ಮೂಲಕ ಜನರಿಗೆ ಸಂದೇಶ ನೀಡಿದರು. ಇಂದು ಲೋಕಕ್ಕೆ ನಾರಾಯಣ ಗುರುಗಳು ಕನ್ನಡಿಯಾಗಿದ್ದಾರೆ. ನಾರಾಯಣ ಗುರು ಅಂದು ಹುಟ್ಟಿ ಬಾರದಿದ್ದರೆ ಇವತ್ತಿನ ಕೇರಳ ಹಾಗೂ ದ.ಕ. ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲೂ ಕಷ್ಟವಾಗುತ್ತಿತ್ತು ಎಂದು ಹೇಳಿದರು.

ಒಂದು ಮೂರ್ತಿಗೆ ಪೂಜೆ ಮಾಡಿ ವೈಭವೀಕರಿಸುವ ಸಂದರ್ಭ ಆ ವ್ಯಕ್ತಿಯ ತತ್ವ, ಸಿದ್ಧಾಂತಗಳನ್ನು ಮರೆತುಬಿಡುವ ಅಪಾಯ ಎದುರಾಗುತ್ತದೆ. ಅಂತಹ ಅಪಾಯದ ಅಡಿಯಲ್ಲಿ ಜನತೆಯಿದೆ. ಧರ್ಮ ಎನ್ನುವುದು ಭಜನೆ, ಮೆರವಣಿಗೆಯಲ್ಲ, ಬದಲಾಗಿ ಅದು ಎಲ್ಲ ಮನುಷ್ಯರ ಜೊತೆ ಮನುಷ್ಯತ್ವ ಇಟ್ಟುಕೊಂಡು ಪ್ರೀತಿಯಿಂದ ಬದುಕುವುದು ಮಾತ್ರ ನಿಜವಾದ ಧರ್ಮವಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ನಾರಾಯಣ ಗುರು ಬಗ್ಗೆ ಸಾವಿರಾರು ಪಿಎಚ್‌ಡಿ ಗ್ರಂಥಗಳು ಬಂದಿವೆ. ಈಗ ಮಂಗಳೂರು ವಿವಿಯಲ್ಲಿ 3 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಗೊಳಿಸಿರುವುದು ಆ ಮಹಾನ್ ವ್ಯಕ್ತಿಯ ಸೇವೆ ಎಂತಹದು ಎನ್ನುವುದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದರು.

ನಮ್ಮನ್ನು ಸಿದ್ಧಾಂತಗಳು ಆಳಬೇಕು. ಸಿದ್ಧಾಂತಗಳ ಅಡಿಯಲ್ಲಿ ನಾರಾಯಣ ಗುರುಗಳು ಬದುಕಿದ್ದರು. ವಿದ್ಯೆಗೆ ಮಹತ್ವವನ್ನು ಕೊಟ್ಟು ಧರ್ಮವನ್ನು ಸಂಘಟನೆಗೆ ಪ್ರಾಧಾನ್ಯತೆ ಕೊಟ್ಟು ಸಂಘಟಿಸಿದರು. ಅವರು ಇನ್ನೊಂದು ಧರ್ಮವನ್ನು ಟೀಕಿಸಲಿಲ್ಲ. ಜಾತಿ, ಧರ್ಮ, ದೇವರು ಒಂದೇ ಎಂದು ಪ್ರತಿಪಾದಿಸಿ ನಾಡನ್ನು ಗಟ್ಟಿಗೊಳಿಸಿದರು. ಜಾತಿ, ಧರ್ಮ, ಮತಗಳಿಂದ ಮಾನವ ಹೊರ ಬರಬೇಕು. ಮಾನವರು ವೈರತ್ವವನ್ನು ಬಿಟ್ಟು ಸ್ವತಂತ್ರವಾಗಿ ಬದುಕಲು ಕಲಿಯಬೇಕು. ಆ ಮೂಲಕ ಉದ್ಧಾರ ಆಗಲು ಸಾಧ್ಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಮಂಗಳೂರು ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್, ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕ್ಷೇತ್ರದ ಟ್ರಸ್ಟಿ ರವಿಶಂಕರ ಮಿಜಾರು, ಮನಪಾ ಸದಸ್ಯರಾದ ಪ್ರತಿಭಾ ಕುಳಾಯಿ, ದೀಪಕ್ ಪೂಜಾರಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಚನಾ ಮತ್ತು ತಂಡ ಪ್ರಾರ್ಥಿಸಿತು. ದೇವಸ್ಥಾನ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್ ( ಎಡ್ವಕೇಟ್) ಸ್ವಾಗತಿಸಿದರು. ದಿನೇಶ್ ಸುವರ್ಣ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ವಂದಿಸಿದರು.

ಕಾರ್ಯಕ್ರಮಕ್ಕೆ ಸಚಿವರು ಸೇರಿದಂತೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದವರಲ್ಲಿ ಕೆಲವರು ಗೈರು 

ಜಿಲ್ಲಾಡಳಿತದ ವ್ಯವಸ್ಥೆಯಂತೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸ ಬೇಕಾದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.ಉಳಿದಂತೆ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗಿದ್ದ ಹಲವು ಶಾಸಕರು, ಮನಪಾ ಅಯುಕ್ತರು,ಹಿರಿಯ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಈ ಮಧ್ಯೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಾಸಕ ವೇದವ್ಯಾಸ ಕಾಮತ್ ಅವರ ಜೊತೆ ಆಗಮಿಸಿ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವಾಪಸಾಗಿದ್ದರು.

ಸಂದೇಶ ಯಾತ್ರೆ :

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಬೆಳಿಗ್ಗೆ ಉರ್ವಸ್ಟೋರ್ ಯುವವಾಹಿನಿ ಕೇಂದ್ರ ಕಚೇರಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಶ್ರೀ ನಾರಾಯಣ ಗುರುಸಂದೇಶ ಯಾತ್ರೆ ಆಗಮಿಸಿತು.

Comments are closed.