ಕರಾವಳಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ : ಶ್ರೀ ಮಂಜುನಾಥನಿಗೆ ವಿಶೇಷ ಪೂಜೆ

Pinterest LinkedIn Tumblr

ಧರ್ಮಸ್ಥಳ, ಆಗಸ್ಟ್.14: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರವಾದ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕಿ ಅನಿತಾ ಕುಮಾರ ಸ್ವಾಮಿ, ದೇವೇಗೌಡರ ಪತ್ನಿ ಚೆನ್ನಮ್ಮ ಸಹಿತ ಕುಟುಂಬದ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ರಾತ್ರಿ 9ಗಂಟೆಯ ಸುಮಾರಿಗೆ ಭೇಟಿ ನೀಡಿದರು.

ದೇವಸ್ಥಾನದ ವತಿಯಿಂದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಹೆಗ್ಗಡೆ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಗೌರವ ಸಲ್ಲಿಸಿ ಸ್ವಾಗತಿಸಿದರು.

ಹಾಸನದ ಮೂಲಕ ಶಿರಾಡಿ ಮಾರ್ಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಕುಮಾರಸ್ವಾಮಿ ದೇವಾಲಯಕ್ಕೆ ತೆರಳಿ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ದೇವೇಗೌಡರ ಪತ್ನಿ ಚೆನ್ನಮ್ಮ, ಅನಿತಾ ಕುಮಾರಸ್ವಾಮಿ ಅವರು ಮಂಜುನಾಥನ ಸನ್ನಿಧಿಯಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಸೋಮವಾರ ಸಂಜೆ 4.30ಕ್ಕೆ ಮುಖ್ಯಮಂತ್ರಿಗಳು ಮತ್ತು ಕುಟುಂಬಸ್ಥರ ಧರ್ಮಸ್ಥಳ ಕ್ಷೇತ್ರದ ಭೇಟಿ ನಿಗದಿಯಾಗಿತ್ತು. ಆದರೆ, 6 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಿದರೂ ಜ್ಯೋತಿಷಿಗಳ ಸೂಚನೆ ಮೇರೆಗೆ ರಾತ್ರಿ 9 ಗಂಟೆಗೆ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದರು.

ದೇವಾಲದಲ್ಲಿ ಶ್ರೀ ಮಂಜುನಾಥನಿಗೆ ಶತರುದ್ರಾಭಿಷೇಕ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದರು.

Comments are closed.