ಕರಾವಳಿ

ದ.ಕ.ಜಿಲ್ಲೆಯಾದ್ಯಂತ ಮತ್ತೆ ಮಳೆಯ ಅರ್ಭಟ : ತಗ್ಗು ಪ್ರದೇಶಗಳು ಜಲಾವೃತ : ಜನಜೀವನ ಅಸ್ತವ್ಯಸ್ತ : ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ

Pinterest LinkedIn Tumblr

ಮಂಗಳೂರು, ಆಗಸ್ಟ್ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಆರ್ಭಟ ಆರಂಭವಾಗಿದೆ. ಕರಾವಳಿಯಲ್ಲಿ ಕಳೆದೆ ಕೆಲವು ದಿನಗಳಿಂದ ವಿರಾಮದಲ್ಲಿದ್ದ ಮಳೆಯ ಅರ್ಭಟ ಮತ್ತೆ ಶುರುವಾಗಿದ್ದು, ಮಂಗಳೂರಿನ ಜನರಲ್ಲಿ ಆತಂಕ ಸೃಷ್ಟಿಸಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ಗುರುವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಹಾಗು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದೆ . ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಈ ಪರಿಣಾಮ ಮತ್ತೆ ಶುಕ್ರವಾರ ಬೆಳಗ್ಗೆಯಿಂದ ನಗರ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ನಗರದ ಕೊಟ್ಟಾರ ಚೌಕಿ, ನಂತೂರು, ಜ್ಯೋತಿ ಸರ್ಕಲ್ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಭಾರೀ ಮಳೆಯ ಪರಿಣಾಮ ಮಂಗಳೂರಿನ ನಗರದ ಹಲವಾರು ರಸ್ತೆಗಳಲ್ಲಿ ಮಳೆ ನೀರು ಹರಿಯಲಾರಂಬಿಸಿದೆ. ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಚರಂಡಿಗಳು ಉಕ್ಕಿ ಹರಿಯುತ್ತಿವೆ. ಕಳೆದ ಮೇ 29ರ ಮಹಾಮಳೆಯ ಪರಿಸ್ಥಿತಿ ನೆನಪಿಸುವಂತೆ ಮಂಗಳೂರಿನಲ್ಲಿ ಮಳೆ ಸುರಿಯುತ್ತಿದೆ.

ಇದೇ ವೇಳೆ ಪಶ್ಚಿಮಘಟ್ಟದಲ್ಲಿ ಬುಧವಾರದಿಂದ ಮಳೆ ಸುರಿಯುತ್ತಿದ್ದು ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಬೆಳ್ತಂಗಡಿ, ಸುಳ್ಯದಲ್ಲಿಯೂ ವರುಣನ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಮನೆ ಹಾಗು ಅಪಾರ ಪ್ರಮಾಣದಲ್ಲಿ ಕೃಷಿ, ತೋಟ ನಾಶವಾಗಿದೆ.

ಭಾರಿ ಮಳೆಯ ಪರಿಣಾಮ ಕುಮಾರಧಾರ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಳೆಯ ಪರಿಣಾಮ ಪುತ್ತೂರು ತಾಲೂಕಿನ ಗುಂಡ್ಯಾ ಸಮೀಪದ ಉದನೆಯಲ್ಲಿ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಶಿರಾಡಿ ಗ್ರಾಮದ ಹಲವು ‌ಮನೆಗಳು ಜಲಾವೃತವಾಗಿದ್ದು, ಉಪ್ಪಿನಂಗಡಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ‌ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆಯೂ ಮುಳುಗಡೆಯಾಗಿದೆ.

ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಕ್ಷೀಣಿಸಿದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಗುರುವಾರ ನೇತ್ರಾವತಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಅಲ್ಲದೆ, ಶಂಭೂರಿನ ಡ್ಯಾಂನಲ್ಲಿಯೂ ನೀರನ್ನು ಹೊರ ಹರಿಯಲು ಬಿಟ್ಟ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬಂಟ್ವಾಳ ವ್ಯಾಪ್ತಿಯ ನದಿ ತಟದ ಪ್ರದೇಶದ ವಿವಿಧೆಡೆ ಪ್ರವಾಹದ ವಾತಾವರಣ ಉಂಟಾಗಿದೆ.

ನೇತ್ರಾವತಿ ನದಿ ತಟದಲ್ಲಿರುವ ಸರಪಾಡಿ ಗ್ರಾಪಂ ವ್ಯಾಪ್ತಿಯ ಅಜಿಲಮೊಗರು ದರ್ಗಾದ ಮುಂಭಾಗ ನೀರು ತುಂಬಿಕೊಂಡಿದ್ದು, ರಸ್ತೆ ಹಾಗೂ ಮಸೀಯ ಕೆಳ ಅಂತಸ್ತಿಗೆ ನೀರು ನುಗ್ಗಿದೆ. ಅಲ್ಲದೆ, ಬೀಯಪಾದೆ ರಸ್ತೆಯೂ ಮುಳುಗಡೆಯಾಗಿದೆ. ಆಲಡ್ಕ ಪರಿಸರದ ಮನೆಗಳ ಸುತ್ತಮುತ್ತ ಜಲಾವೃತಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Comments are closed.