ಕರಾವಳಿ

ನವೆಂಬರ್ 23 -24: ದುಬೈಯಲ್ಲಿ “ವಿಶ್ವ ತುಳು ಸಮ್ಮೇಳನ ದುಬಾಯಿ” 2018 – ಅನಿವಾಸಿ ತುಳುವರ ಬೃಹತ್ ಸಮಾವೇಶ

Pinterest LinkedIn Tumblr

ಮಂಗಳೂರು, ಜುಲೈ.24: ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದ ಸಹಯೋಗದಿಂದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ “ವಿಶ್ವ ತುಳು ಸಮ್ಮೇಳನ ದುಬಾಯಿ” 2018 ನವೆಂಬರ್ 23ನೇ ತಾರೀಕು ಶುಕ್ರವಾರ ಮತ್ತು 24ನೇ ಶನಿವಾರ ದುಬಾಯಿಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿದೆ ಎಂದು ಸಾಗರೋತ್ತರ ತುಳುವರು ಇದರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಬ್ ಸಂಯುಕ್ತ ಸಂಸ್ಥಾನದಲ್ಲಿಯೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಅನಿವಾಸಿ ತುಳುವರ ಬೃಹತ್ ಸಮಾವೇಶ ಇದಾಗಿದೆ. ಕೊಲ್ಲಿ ತುಳುವರು, ಅಖಿಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾಗರೋತ್ತರ ತುಳುವರು ಇವರುಗಳ ಸಹಯೋಗದೊಂದಿಗೆ ಆಯೋಜಿಸ ಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪರಮ ಪೂಜ್ಯ ಪದ್ಮ ವಿಭೂಷಣ ಪುರಸ್ಕೃತ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾಗಿ ಅಬುಧಾಬಿ ಎನ್. ಎಂ. ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಂದನೀಯ ಧರ್ಮಧ್ಯಾಕ್ಷರು ಮತ್ತು ಮುಸ್ಲಿಂ ಪ್ರವಚನಕಾರರು ಭಾಗವಹಿಸಲಿದ್ದಾರೆ. ಇದರ ಜತೆಗೆ ರಾಜ್ಯ ಹಾಗೂ ಸಾಗರದಾಚೆಯ ಗಲ್ಪ್, ಅಮೆರಿಕ, ಆಸ್ಟ್ರೇಲಿಯಾ, ಯು.ಕೆ. ತುಳು ಸಂಘಟನೆಗಳ ಅಧ್ಯಕ್ಷರು ಹಾಗೂ ಹೊರನಾಡ ತುಳು ಸಂಘಟನೆಗಳಾದ ಮುಂಬೈ, ದಿಲ್ಲಿ, ಬರೋಡ, ನಾಸಿಕ್, ಸಾಂಗಿ, ಪುಣೆ, ಚೆನ್ನೈ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಐತಿಹಾಸಿಕ ದಾಖಲೆಯಾಗಲಿರುವ ವಿಶ್ವ ತುಳು ಸಮ್ಮೇಳನದ ಅಂಗವಾಗಿ ವಿಶ್ವ ತುಳು ಐಸಿರಿ ವಿಶೇಷ ಸ್ಮರಣ ಸಂಚಿಕೆ ಲೋಕಾರ್ಪಣೆ ಗೊಳ್ಳಲಿದೆ. ಇದರ ಜತೆಗೆ ತುಳು ಜಾನಪದ ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಗಲ್ಪ್ ರಾಷ್ಟ್ರಗಳಾದ ಮಸ್ಕತ್, ಬಹರಿನ್, ಕತರ್, ಕುವೈತ್, ಸೌದಿ ಅರೇಬಿಯಾ, ಒಮನ್ ಮತ್ತು ಯುಎಇಯ ಹಲವು ಜಾನಪದ ತಂಡಗಳು ಕಾಣಿಸಿಕೊಳ್ಳಲಿದೆ. ಅಲ್ಲದೆ ತಾಳ ಮದ್ದಳೆ, ಯಕ್ಷಗಾನ ನಾಟ್ಯವೈಭವ, ತುಳುರಸಮಂಜರಿ, ತುಳು ಸಾಹಿತ್ಯ ಗೋಷ್ಠಿ, ತುಳು ಕೋಡೆ ಇನಿ ಎಲ್ಲೆ, ದೈವಾರಾಧನೆ, ನಾಗಾರಾಧನೆ ಮತ್ತು ಭೂತಾರಾಧನೆ ಬಗ್ಗೆ ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳುರಂಗಭೂಮಿ ಮತ್ತು ಚಲನಚಿತ್ರ ಗೋಷ್ಠಿ, ಹೊರನಾಡ ತುಳು ಸಂಘಟನೆಗಳ ಅಧ್ಯಕ್ಷರ ಗೋಷ್ಠಿ ನಡೆಯಲಿದೆ

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ ತುಳು ಸಾಹಿತ್ಯ ಗೋಷ್ಠಿ – ತುಳು ಕೋಡೆ – ಇನಿ – ಎಲ್ಲೆ. ದೈವಾರಾಧನೆ ಮತ್ತು ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಥಿ, ತುಳು ರಂಗ ಭೂಮಿ ಮತ್ತು ಚಲನ ಚಿತ್ರ ಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು ವಿದ್ವಾಂಸರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಅವರು ವಿವರ ನೀಡಿದರು.

ವಿಶ್ವ ತುಳು ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಬೆಂಬಲವನ್ನು ಕೋರಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿಯೋಂದಿಗೆ ಯು.ಎ.ಇ.ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳನ್ನು ಮತ್ತು ಭಾರತದಲ್ಲಿ ಹಾಗೂ ವಿದೇಶಗಳಲ್ಲಿರುವ ತುಳು ಭಾಷಾ ಸಂಘ ಸಂಸ್ಥೆಗಳನ್ನು ಶೀಘ್ರದಲ್ಲಿ ಸಂಪರ್ಕಿಸಲಾಗುವುದು ಎಂದು ಈ ಸಂದರ್ಭದಲ್ಲಿ ಸರ್ವೋತ್ತಮ ಶೆಟ್ಟಿಯವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಯು.ಧರ್ಮಪಾಲ್ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ನಿಟ್ಟೆ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.

Comments are closed.