ಕರಾವಳಿ

ದೀಪಕ್ ರಾವ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಏಳು ತಿಂಗಳ ಬಳಿಕ ಬಂಧನ

Pinterest LinkedIn Tumblr

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್

ಮಂಗಳೂರು, ಜುಲೈ.18: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಜನವರಿ ತಿಂಗಳಲ್ಲಿ ನಡೆದಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಾಪುರ 4ನೇ ಬ್ಲಾಕ್‌ ಬಳಿಯ ನಿವಾಸಿ ಸಫ್ವಾನ್ ಯಾನೆ ಚಪ್ಪು (23) ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿ ರಿಝ್ವಾನ್ ಯಾನೆ ರಿಜ್ಜು ಎಂಬಾತನ ಸಹೋದರ ಎನ್ನಲಾಗಿದೆ.

ಆರೋಪಿಯನ್ನು ಸುರತ್ಕಲ್ ಮುಕ್ಕ ಬಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿರುವುದನ್ನು ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕ್ಕಾಗಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಮಂಜುನಾಥ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಕರಣದ ಹಿನ್ನೆಲೆ:

2018 ಜ. 3ರಂದು ಕಾಟಿಪಳ್ಳ 2ನೇ ಬ್ಲಾಕ್‌ ಸಮೀಪ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ (30) ರನ್ನು ಅಬ್ದುಲ್ ಮಜೀದ್ ಎಂಬವರ ಮನೆಯ ಎದುರು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿತ್ತು.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳ ಪೈಕಿ 12 ಮಂದಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಿಜೆಪಿ ಕಾರ್ಯಕರ್ತರಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸುದ್ಧಿಯಾಗಿತ್ತು. ರಾಜಕೀಯ ಆರೋಪ – ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಇದೀಗ ಸಫ್ವಾನ್ ಬಂಧನದೊಂದಿಗೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.

Comments are closed.