ಕರಾವಳಿ

ನಿಧಿಯಾಸೆಗೆ ಮಹಿಳೆ ಹಾಗೂ ಮಕ್ಕಳನ್ನು ಅಪಹರಿಸಿ ಬಲಿ ಕೊಡಲು ಸಿದ್ದತೆ : ಆರೋಪಿ ಸೆರೆ – ಮೂವರ ರಕ್ಷಣೆ

Pinterest LinkedIn Tumblr

ಮಂಗಳೂರು, ಜುಲೈ.16: ನಿಧಿಗಾಗಿ ಬಲಿ ಕೊಡಲು ಸಂಚು ರೂಪಿಸಿದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಲಿ ಕೊಡಲು ಅಪಹರಣ ಮಾಡಲಾಗಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.

ಈ ಭಯನಕ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಎಂಬಲ್ಲಿ ನಡೆದಿದ್ದು, ನಿಧಿಯಾಸೆಗಾಗಿ ಬಲಿ ಕೊಡಲು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಅಪಹರಿಸಿ ಕೂಡಿಟ್ಟಿದ್ದ ಆರೋಪಿಯನ್ನು ಹಾಸನ ಜಿಲ್ಲಾ ಪೊಲೀಸರು ತಣ್ಣೀರುಹಳ್ಳ ಎಂಬಲ್ಲಿ ಬಂಧಿಸಿದ್ದಾರೆ.

ನಿಡ್ಲೆ ನಿವಾಸಿ ಜೆಸಿಬಿ, ಹಿಟಾಚಿ ಅರ್ಥ್ ಮೂವರ್‍ಸ್ ಉದ್ಯಮಿ ಅನಿಲ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು ಪೊಲೀಸ್ ವಶವಾಗಿದ್ದಾನೆ. ಈತನ ಜೆಸಿಬಿಯಲ್ಲಿ ಕೆಲವು ವರ್ಷಗಳಿಂದ ಆಪರೇಟರ್ ಆಗಿರುವ ರಾಜೇಶ್ ಎಂಬವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಳೆದ ಜು.೧೧ರಂದು ಅನಿಲ್ ಅಪಹರಿಸಿ ಹಾಸನ ಜಿಲ್ಲೆಯ ತಣ್ಣೀರುಹಳ್ಳಕ್ಕೆ ಕರೆದೊಯ್ದು ಮನೆಯೊಂದರಲ್ಲಿ ಕೂಡಿಹಾಕಿದ್ದ ಎನ್ನಲಾಗಿದೆ.

ರಾಜೇಶ್ ಕೆಲಸಕ್ಕೆ ತೆರಳಿದ್ದ ಸಂದರ್ಭ ಮಹಿಳೆ ಮತ್ತು ಮಕ್ಕಳನ್ನು ಉಪಾಯದಿಂದ ಈತ ಕರೆದೊಯ್ದಿದ್ದ. ಮಹಿಳೆಯನ್ನು ಕೂಡಿಹಾಕಿದ್ದ ಮನೆಗೆ ಮಾಂತ್ರಿಕನೊಬ್ಬ ಬಂದು ಅನಿಲ್ ಜೊತೆ ಮಾತಾಡಿದ್ದನ್ನು ಕೇಳಿಸಿಕೊಂಡಿದ್ದ ಮಹಿಳೆ ಅದನ್ನು ತನ್ನ ಪತಿಗೆ ಕರೆ ಮಾಡಿ ತಿಳಿಸಿದ್ದಲ್ಲದೆ ತಾನು ತಣ್ಣೀರುಹಳ್ಳದಲ್ಲಿ ಬಂಧಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ತನ್ನನ್ನು ಬಲಿಕೊಡುವುದಾಗಿ ಮಾಂತ್ರಿಕನ ಜೊತೆ ಅನಿಲ್ ಹೇಳಿದ್ದನ್ನು ತಿಳಿಸಿದ್ದಳು. ಇದನ್ನು ರೆಕಾರ್ಡ್ ಮಾಡಿಕೊಂಡ ರಾಜೇಶ್ ಅದನ್ನು ಪೊಲೀಸರಿಗೆ ರವಾನಿಸಿದ್ದು ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಮಹಿಳೆ ಮತ್ತು ಮಕ್ಕಳನ್ನು ಬಂಧಮುಕ್ತಗೊಳಿಸಿದ್ದಾರೆ. ಮಹಿಳೆ ಮತ್ತು ಅನಿಲ್‌ನ ವಿಚಾರಣೆ ಮುಂದುವರಿದಿದೆ. ಹಾಸನ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಹಿನ್ನೆಲೆ ಏನು ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

ಅಮಾವಾಸ್ಯೆಗೆ ಹುಟ್ಟಿದ್ದ ಮಹಿಳೆ ಟಾರ್ಗೇಟ್ :

ಅಮಾವಾಸ್ಯೆಗೆ ಹುಟ್ಟಿದ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಬಲಿಕೊಟ್ಟರೆ ನಿಧಿ ಸಿಗುತ್ತದೆ ಎಂದು ಹಾಸನ ಮೂಲದ ಮಾಂತ್ರಿಕನೊಬ್ಬ ಅನಿಲ್‌ಗೆ ಹೇಳಿದ್ದ ಎನ್ನಲಾಗಿದೆ. ಇದನ್ನೇ ನಂಬಿದ ಅನಿಲ್ ತನ್ನ ಜೊತೆ ದುಡಿಯುತ್ತಿದ್ದ ರಾಜೇಶ್‌ನ ಪತ್ನಿಯೂ ಅಮಾವಾಸ್ಯೆಯಂದೇ ಹುಟ್ಟಿದ್ದಳು ಎನ್ನುವುದನ್ನು ಖಚಿತಪಡಿಸಿಕೊಂಡು ಆಕೆಯ ಮತ್ತು ಮಕ್ಕಳ ಅಪಹರಣಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರಂತೆ ಅಪಹರಣ ಮಾಡುವಲ್ಲಿ ಯಶಸ್ವಿಯೂ ಆಗಿದ್ದು, ಇನ್ನೇನು ಬಲಿ ಕೊಡಬೇಕು ಅನ್ನುವಷ್ಟರಲ್ಲಿ ಪೊಲೀಸ್ ವಶವಾಗಿದ್ದಾನೆ.

Comments are closed.