ಕರಾವಳಿ

ಮದುವೆ ಹಾಲ್‌ಗಳ ಮುಂಭಾಗ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ : ವಾಹನ ಮಾಲಕರ ಆಕ್ರೋಶ

Pinterest LinkedIn Tumblr

ಮಂಗಳೂರು, ಜುಲೈ.15: ಮದುವೆ ಹಾಲ್‌ಗಳ ಮುಂದೆ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಪೊಲೀಸರ ನಿಲುವಿಗೆ ವಾಹನಗಳ ಮಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ರವಿವಾರ ನಗರದಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮದುವೆ ಹಾಲ್‌ಗಳ ಮುಂದೆ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಸಮರ ಸಾರಿರುವ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ವಾಹನಗಳಿಗೆ ಲಾಕ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದರು.

ಇಂದು ಕೂಡ ನಗರದ ಎರಡು-ಮೂರು ಕಡೆ ಮದುವೆ ಮತ್ತಿತರ ಕಾರ್ಯಕ್ರಮ ನಡೆದಿದ್ದು, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ವಾಹನಗಳನ್ನು ಅನಧಿಕೃತವಾಗಿ ಪಾರ್ಕ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಾಹನಗಳ ಚಕ್ರಕ್ಕೆ ‘ಲಾಕ್’ ಅಳವಡಿಸಿದ್ದರು. ಇದನ್ನು ನಿರೀಕ್ಷಿಸದ ವಾಹನಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಪೊಲೀಸರು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇತ್ತೀಚಿಗೆ ಮಂಗಳೂರಿನ ಜನನಿಬಿಡ ಸ್ಥಳಗಳಲ್ಲಿರುವ ಮದುವೆ ಹಾಲ್‌ಗಳ ಮುಂದೆ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ಪಾರ್ಕ್ ಮಾಡುವವರ ವಿರುದ್ಧ ಮಂಗಳೂರು ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತೀ ವಾರ ನಡೆಯುವ ಫೋನ್‌ಇನ್ ಕಾರ್ಯಕ್ರಮದಲ್ಲಿ ಮದುವೆ ಸಮಾರಂಭ ನಡೆಯುವ ಸಮಯದಲ್ಲಿ ಮದುವೆ ಹಾಲ್‌ಗಳ ಮುಂದೆ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಅವರು, ಮದುವೆ ಹಾಲ್‌ಗಳ ಮುಂಭಾಗ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರ ವಿನಾಕಾರಣ ಅಡಚಣೆ ಉಂಟಾಗುತ್ತಿದ್ದು, ಅನಧಿಕೃತವಾಗಿ ವಾಹನಗಳ ನಿಲುಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮಾತ್ರವಲ್ಲದೇ ಅನಧಿಕೃತವಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾಹನಗಳನ್ನು ಲಾಕ್ ಮಾಡಿ ಪ್ರಕರಣ ದಾಖಲಿಸಲು ಸಂಚಾರ ಎಸಿಪಿ ಮಂಜುನಾಥ್ ಶೆಟ್ಟಿ ಅವರಿಗೆ ಡಿಸಿಪಿ ಹನುಮಂತರಾಯ ಅವರು ಸೂಚಿಸಿದ್ದರು.

Comments are closed.