ಕರಾವಳಿ

ಮೌಲ್ಯಯುತವಾಗಿ ಬದುಕುವುದು ಹೇಗೆ ಎಂಬುದನ್ನು ಬದುಕಿ ತೋರಿಸುವುದೇ ದೊಡ್ಡ ಸಾಧನೆ :ಡಾ. ಬಿ.ಎಂ.ಹೆಗ್ಡೆ

Pinterest LinkedIn Tumblr

ಮಂಗಳೂರು, ಜುಲೈ.14: ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯೇ ಮುಖ್ಯ ಅಲ್ಲ. ಅಂಕಕ್ಕೂ ಮೀರಿದ ಮೌಲ್ಯವಿದೆ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯ ಡಾ. ಬಿ.ಎಂ.ಹೆಗ್ಡೆ ಅಭಿಪ್ರಾಯಪಟ್ಟರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದ.ಕ. ಜಿಪಂನ ‘ನೇತ್ರಾವತಿ ಸಭಾಂಗಣ’ದಲ್ಲಿ ನಿನ್ನೆ ಕನ್ನಡ ಭಾಷಾ ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕನ್ನಡ ಸಾಧಕ ‘ಪ್ರತಿಭಾ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅಂಕವನ್ನೇ ನಂಬಿ ಕೂರಬಾರದು. ಹಿಂದೆ 100ರಲ್ಲಿ 100 ಅಂಕ ಕೊಡುವ ಕ್ರಮ ಇರಲಿಲ್ಲ. ಈಗ ಯಾಕೋ ಆ ಪರಿಪಾಠ ಬೆಳೆದಿದೆ. ಹಾಗಂತ125ರಲ್ಲಿ 125ಅಂಕ ನೀಡಲಾಗುತ್ತದೆ. ಹೀಗೆ ಅಂಕ ಗಳಿಸುವುದು ದೊಡ್ಡ ಸಾಧನೆಯಲ್ಲ. ಹಲವಾರು ಪದವಿ ಪಡೆದು ಅಗಾಧ ಮೊತ್ತದ ಸಂಬಳ ಪಡೆಯುವುದು ಕೂಡ ದೊಡ್ಡ ವಿಷಯವಲ್ಲ. ಮೌಲ್ಯಯುತವಾಗಿ ಬದುಕುವುದು ಹೇಗೆ ಎಂಬುದನ್ನು ಬದುಕಿ ತೋರಿಸುವುದೇ ದೊಡ್ಡ ಸಾಧನೆಯಾಗಿದೆ ಎಂದು ಡಾ.ಬಿ.ಎಂ.ಹೆಗ್ಡೆ ಅಭಿಪ್ರಾಯಪಟ್ಟರು.

ಈಗ ವಿದ್ಯಾರ್ಥಿಗಳ ಮೇಲೆ ಕಲಿಕೆಗಾಗಿ ಒತ್ತಡ ಹೇರಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿವೆ. ಇದು ಒಳ್ಳೆಯದಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನೊಳಗೆ ಪೈಪೋಟಿ ಮಾಡಲು ಮುಂದಾಗಬೇಕು ಎಂದು ಡಾ.ಬಿ.ಎಂ.ಹೆಗ್ಡೆ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ  ಎಸ್. ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲಿಪಿ ತಜ್ಞ ಕೆ.ಪಿ.ರಾವ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮತ್ತಿತರರು ಭಾಗವಹಿಸಿದ್ದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು.

Comments are closed.