ಕರಾವಳಿ

ಮಂಗಳವಾರ ಬೆಂಗಳೂರಿನಲ್ಲಿ ವಿಧಿವಶರಾದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್‌ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಬಜ್ಪೆಯಲ್ಲಿ ಅಂತ್ಯಕ್ರಿಯೆ

Pinterest LinkedIn Tumblr

ಮಂಗಳೂರು, ಜುಲೈ.10: ಮಂಗಳೂರು ನಿವಾಸಿ, ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಜ್ಪೆ ಅಬ್ದುಲ್ ಖಾದರ್ (ಬಿ.ಎ. ಮೊಹಿದಿನ್, 81 ವರ್ಷ) ಅವರು ಮಂಗಳವಾರ ಮುಂಜಾನೆ ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವು ಮಂಗಳವಾರ ರಾತ್ರಿ ಬಜ್ಪೆ ಈದ್ಗಾ ಜುಮಾ ಮಸ್ಜಿದ್ ಬಳಿ ನಡೆಯಿತು.ಅದಕ್ಕೂ ಮೊದಲು ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ದ.ಕ. ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸರಕಾರಿ ಗೌರವ ನೆರವೇರಿಸಿಕೊಟ್ಟರು.

ಮೊಹಿದಿನ್ ಅವರ ಮೃತದೇಹವನ್ನು ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನೊಂದಿಗೆ ಮಂಗಳೂರಿಗೆ ತರಲಾಯಿತು. ಸಂಜೆ ಸುಮಾರು 4:50ಕ್ಕೆ ಬಜ್ಪೆ ಸಮೀಪದ ಮುರನಗರದಲ್ಲಿರುವ ಸ್ವಗೃಹಕ್ಕೆ ತಂದು ಅಲ್ಲಿ ಅಂತಿಮ ದರ್ಶನಕ್ಕಿಡಲಾಯಿತು. ಈ ಸಂದರ್ಭ ಕುಟುಂಬದ ಸದಸ್ಯರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಆಪ್ತರು ಪಾಲ್ಗೊಂಡಿದ್ದರು.

ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಗಿದ್ದ ಬಿ.ಎ. ಮೊಹಿದಿನ್ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಕಳೆದ ವಾರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾದ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುಂಜಾನೆ ಸುಮಾರು 6 ಗಂಟೆಗೆ ಅಲ್ಲಿ ನಿಧನರಾಗಿದ್ದಾರೆ.

ಸುಮಾರು 8 ಗಂಟೆಗೆ ಮೊಹಿದಿನ್ ಅವರ ಪ್ರಾರ್ಥಿವ ಶರೀರವನ್ನು ಬೆಂಗಳೂರಿನ ಸಂಜಯ ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಸುಮಾರು 11 ಗಂಟೆಯ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಬಳಿಕ ಮಂಗಳೂರಿಗೆ ಕೊಂಡೊಯ್ಯಲಾಯಿತು.

ಮುಸ್ಲಿಮ್ ಸಮುದಾಯದ ಪ್ರಮುಖ ನಾಯಕ :

ಬಜ್ಪೆ ಸಮೀಪದ ಕುಗ್ರಾಮವಾದ ಪೇಜಾವರ (ಬ್ಯಾರಿ ಭಾಷೆಯಲ್ಲಿ ಪ್ಯಾರ) ಎಂಬಲ್ಲಿ ಜೂನ್ 5, 1938ರಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಬೆಳೆದ ಬಿ.ಎ. ಮೊಹಿದಿನ್ (ಬಜ್ಪೆ ಅಬ್ದುಲ್ ಖಾದರ್ ಮೊಹಿದಿನ್) ‘ಗಣ್ಯ’ರ ಸ್ಥಾನದಲ್ಲಿ ಮೆರೆದುದರ ಹಿಂದೆ ಅವರದೇ ಪರಿಶ್ರಮವಿದೆ. ಬಹುಶಃ ಅವರು ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡದೇ ಇರುತ್ತಿದ್ದರೆ ಒಬ್ಬ ನುರಿತ ಮುತ್ಸದ್ದಿಯನ್ನು ರಾಜಕೀಯ ಕ್ಷೇತ್ರ ಕಳಕೊಳ್ಳುತ್ತಿತ್ತೋ ಏನೋ ?.

ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡೇ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಬಿ.ಎ.ಮೊಹಿದಿನ್ ಮುಸ್ಲಿಮ್ ಸಮುದಾಯದ ಪ್ರಮುಖ ನಾಯಕರೂ ಆಗಿ ಗುರುತಿಸಲ್ಪಟ್ಟಿದ್ದರು.

ದ.ಕ.ಜಿಲ್ಲೆಯ ಪ್ರಪ್ರಥಮ ಮುಸ್ಲಿಮ್ ಉಸ್ತುವಾರಿ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿ.ಎ.ಮೊಹಿದಿನ್ ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಮೆರೆದವರು. ರಾಜಕೀಯ ಮಾತ್ರವಲ್ಲ ವ್ಯಕ್ತಿಗತವಾಗಿಯೂ ಒಂದೇ ಒಂದು ಕಪ್ಪು ಚುಕ್ಕೆ ಬೀಳದಂತೆ ವರ್ಛಸ್ಸು ಬೆಳೆಸಿಕೊಂಡಿದ್ದ ಬಿ.ಎ.ಮೊಹಿದಿನ್‌ ತನ್ನ ದೂರದೃಷ್ಟಿಯಿಂದಲೇ ಕರಾವಳಿಯ ಮುಸ್ಲಿಮ್ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ತಂದವರು.

ಬಿಡುಗಡೆಗೆ ಸಿದ್ದವಾಗಿದೆ – ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು” 

ಕರಾವಳಿಯ ಕಾಂಗ್ರೆಸ್ ಹಿರಿಯ ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’. ಬಿಡುಗಡೆಗೆ ಸಿದ್ದವಾಗಿದೆ. ‘ನನ್ನೊಳಗಿನ ನಾನು’ ಬಿಡುಗಡೆಗೆ ಮುನ್ನವೇ ಕುತೂಹಲ ಸೃಷ್ಠಿಸಿದೆ. ಕರಾವಳಿಯಲ್ಲಿ ಕಾಂಗ್ರೆಸ್ ನಾಯಕರ ಸ್ಫೋಟಕ ಮಾಹಿತಿಗಳನ್ನು ತಮ್ಮ ಆತ್ಮಕಥೆಯಲ್ಲಿ ಬರೆದಿರುವ ಮೊಹಿದೀನ್ ಅವರು, ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ತಮ್ಮ ಆತ್ಮಕಥೆಯಲ್ಲಿ ತಮ್ಮ ನೋವನ್ನು ತೆರೆದಿಟ್ಟಿದ್ದಾರೆ.

ನನಗೀಗ 80 ವರ್ಷ ಪ್ರಾಯ. ಬದುಕಿನ ಮುಸ್ಸಂಜೆಯ ಹೊತ್ತು ಎಂದು ಆರಂಭಿಸುವ ಮೊಹಿದೀನ್ ಅವರು ತನ್ನ ಬಾಲ್ಯ, ಶಿಕ್ಷಣ, ಕಾಲೇಜಿನ ದಿನಗಳು , ಮದುವೆ ಎಲ್ಲವನ್ನೂ ಆತ್ಮಕಥೆಯಲ್ಲಿ ವಿವರಿಸಿದ್ದಾರೆ. ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡ ಮೊಹಿದಿನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿರಿಯ ನಾಯಕರ ವಿರುದ್ಧವೇ ತಮ್ಮ ಆತ್ಮಕಥೆಯಲ್ಲಿ ಗುಡುಗಿದ್ದಾರೆ.

ರಾಜಕೀಯದಲ್ಲಿ ಉಂಡ ಸಿಹಿ – ಕಹಿ ಘಟನೆಗಳನ್ನು ಮೊಹಿದೀನ್ ಅವರು 232 ಪುಟಗಳ ತನ್ನ ಆತ್ಮಕಥನದಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ. ತನ್ನ ಬದುಕಿನ ನೆನಪುಗಳನ್ನು ಅವರು ಹಂಚಿಕೊಂಡಿದ್ದ ‘ನನ್ನೊಳಗಿನ ನಾನು’ ಕೃತಿ ಇದೇ ತಿಂಗಳು 20 ಕ್ಕೆ ಬಿಡುಗಡೆಯಾಗಲಿದೆ. ‘ನನ್ನೊಳಗಿನ ನಾನು’ ಆತ್ಮಕಥೆಯ ನಿರೂಪಣೆಯ ಕಾರ್ಯವನ್ನು ಮಹಮ್ಮದ್ ಕುಳಾಯಿ ಮತ್ತು ಬಿ.ಎ. ಮೊಹಮ್ಮದ್ ಆಲಿ ವಹಿಸಿದ್ದಾರೆ.

ಸ಼ಚಿವರು ಸೇರಿದಂತೆ ಹಲವಾರು ಗಣ್ಯರಿಂದ ಅಂತಿಮ ದರ್ಶನ:

ರಾಜ್ಯ ವಿಧಾನ ಸಭೆಯ ಸ್ಪೀಕರ್ ರಮೇಶ್ ಕುಮಾರ್, ವಸತಿ ಸಚಿವ ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾಧಿಕಾರಿ ಸಸಿಕುಮಾರ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಯನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಯನೆಪೊಯ ವಿವಿಯ ಕುಲಪತಿ ವೈ ಅಬ್ದುಲ್ಲಾ ಕುಂಞಿ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯ ಯು.ಟಿ. ಇಫ್ತಿಕಾರ್ ಅಲಿ, ಹಿರಿಯ ಜಾನಪದ ವಿದ್ವಾಂಸ ಪ್ರೊ. ಬಿ.ಎ.ವಿವೇಕ ರೈ, ಮಾಜಿ ಶಾಸಕರಾದ ಬಿ.ಎ. ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಉದ್ಯಮಿಗಳಾದ ಸೈಯದ್ ಮುಹಮ್ಮದ್ ಬ್ಯಾರಿ, ಸಿದ್ದೀಕ್ ಬ್ಯಾರಿ, ಎಸ್.ಎಂ. ರಶೀದ್ ಹಾಜಿ, ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಎಂ.ಬಿ.ಅಬ್ದುಲ್ ರಹ್ಮಾನ್, ಬಿ.ಎ.ಮುಹಮ್ಮದ್ ಹನೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಹಿದಾಯ ಫೌಂಡೇಶನ್‌ನ ಖಾಸಿಂ ಅಹ್ಮದ್, ರಾಜ್ಯ ಆಹಾರ ಆಯೋಗದ ಸದಸ್ಯ ಮುಹಮ್ಮದ್ ಅಲಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಾಜಿ ಮೇಯರ್‌ಗಳಾದ ದಿವಾಕರ, ಗುಲ್ಜಾರ್ ಬಾನು, ಶಶಿಧರ ಹೆಗ್ಡೆ, ಉಪಮೇಯರ್ ಬಶೀರ್ ಬೈಕಂಪಾಡಿ, ಜಿಪಂ ಸದಸ್ಯರಾದ ಕೆ.ಕೆ.ಶಾಹಲ್ ಹಮೀದ್, ಪ್ರಕಾಶ್ ಶೆಟ್ಟಿ ತುಂಬೆ, ಅಕ್ಷರ ಸಂತ ಹರೇಕಳ ಹಾಜಬ್ಬ, ಬ್ಯಾರಿ ಅಕಾಡಮಿಯ ಸದಸ್ಯ ಅಬ್ದುರ್ರಹ್ಮಾನ್ ಕುತ್ತೆತ್ತೂರು ಸಹಿತ ಸಾವಿರಾರು ಮಂದಿ ಅಂತಿಮ ದರ್ಶನಗೈದರು.

Comments are closed.