ಕರಾವಳಿ

ಹುತಾತ್ಮ ಯೋಧರ ಕುಟುಂಬಕ್ಕೆ ನಿಧಿ ಸಂಗ್ರಹ : ಕಾಶ್ಮೀರದಿಂದ ಕನ್ಯಾಕುಮಾರಿಗೆ ಯೋಧನ ಸೈಕಲ್ ಸವಾರಿ

Pinterest LinkedIn Tumblr

ಮಂಗಳೂರು, ಜುಲೈ.10: ಹುತಾತ್ಮ ಯೋಧರ ಕುಟುಂಬಕ್ಕೆ ನಿಧಿ ಸಂಗ್ರಹ ಮಾಡಿ ಸಹಾಯ ಮಾಡುವ ನಿಟ್ಟಿನಲ್ಲಿ ಹಾಗೂ ಆರ್ಮ್‌ಡ್ ಫೋರ್ಸ್ ಫ್ಲಾಗ್ ಡೇ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ನೌಕಾದಳದ ಲೆ. ಕಮಾಂಡರ್ ಮನೋಜ್ ಗುಪ್ತಾ ಕಾಶ್ಮೀರದ ಲಡಾಕ್‌ನಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ನಡೆಸಿದ್ದಾರೆ.

ಮನೋಜ್ ಗುಪ್ತಾ ಕಾಶ್ಮೀರದ ಲಡಾಕ್ ಮತ್ತು ಕನ್ಯಾಕುಮಾರಿಯ ತಮ್ಮ ಮಾರ್ಗಮಧ್ಯೆ ರವಿವಾರ ಬೆಳಗ್ಗೆ 5:30ಕ್ಕೆ ಉಡುಪಿಯಿಂದ ಹೊರಟಿದ್ದ ಅವರು, ಮಧ್ಯಾಹ್ನದ ವೇಳೆಗೆ ಮಂಗಳೂರಿಗೆ ಆಗಮಿಸಿದರು. ನಗರದ ಬಲ್ಲಾಲ್‌ಭಾಗ್‌ನಲ್ಲಿರುವ ‘ಟ್ರಾಕ್ ಯಂಡ್ ಟ್ರೈಲ್’ ಎನ್ನುವ ಮಳಿಗೆಗೆ ಭೇಟಿ ನೀಡಿದರು.

ಲೆ. ಕಮಾಂಡರ್ ಮನೋಜ್ ಗುಪ್ತಾ ಒಂಟಿಯಾಗಿ ಈ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಆರ್ಮ್‌ಡ್ ಫೋರ್ಸ್ ಫ್ಲಾಗ್ ಡೇ ಕುರಿತ ವಿಶೇಷತೆ ಬಗ್ಗೆ ತಿಳಿಸಿದರು. ಹುತಾತ್ಮ ಸೈನಿಕರ ಪತ್ನಿ, ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಿಧಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸೈಕಲ್ ಸವಾರಿ ಕುರಿತು ಕಳೆದ ಡಿಸೆಂಬರ್‌ನಲ್ಲಿಯೇ ಯೋಜನೆ ರೂಪಿಸಲಾಗಿತ್ತು. ಜೂನ್ 6ರಿಂದ ಸೈಕಲ್ ಸವಾರಿಯನ್ನು ಕೈಗೊಂಡಿದ್ದೇನೆ. ಜುಲೈ 17ರಂದು ಕನ್ಯಾಕುಮಾರಿ ತಲುಪುವ ಸಾಧ್ಯತೆ ಇದೆ ಎಂದರು.

ಇಲ್ಲಿಯವರೆಗೆ ಸುಮಾರು 3000ಕಿ.ಮೀ. ಪ್ರಯಾಣಿಸಿದ್ದೇನೆ. 11 ರಾಜ್ಯಗಳ 45ಕ್ಕೂ ಹೆಚ್ಚು ಜಿಲ್ಲೆಗಳ ಮೂಲಕ ಈಗ ಮಂಗಳೂರನ್ನು ತಲುಪಿದ್ದೇನೆ. ಪ್ರತಿದಿನ ಸುಮಾರು 120 ಕಿ.ಮೀ. ಸಂಚರಿಸುತ್ತೇನೆ. ವಾತಾವರಣ ಸಮರ್ಪಕವಾಗಿದ್ದರೆ ಬೆಳಗ್ಗೆ 5:30ರಿಂದ ಸೂರ್ಯೋದಯದ ವರೆಗೆ ಪ್ರಯಾಣ ಮುಂದುವರಿಸುತ್ತೇನೆ ಎಂದು ತಿಳಿಸಿದರು.

ಮೊಬೈಲ್ ಟ್ರಾಕ್ ಮೂಲಕ ಪ್ರಯಾಣ ನಡೆಸುತ್ತೇನೆ. ನನ್ನಂತೆಯೇ ಹಲವರು ಸ್ವಚ್ಛ ಭಾರತ್ ಯೋಜನೆ ಮತ್ತಿತರ ವಿಷಯಗಳ ಕುರಿತು ನೌಕಾದಳದಿಂದ ಯಾತ್ರೆಯನ್ನು ಕೈಗೊಂಡಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ನಡೆಸುವ ಮೂಲಕ ಸುಮಾರು 5 ಲಕ್ಷ ರೂ. ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇನೆ. ಸಹಾಯಧನವನ್ನು ಆನ್‌ಲೈನ್ ಮೂಲಕವೂ ವರ್ಗಾವಣೇ ಮಾಡಬಹುದಾಗಿದೆ. ಇಂದು (ರವಿವಾರ) ಸಂಜೆ ಕೇರಳದ ಕುಂಬ್ಳೆದಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಪ್ರಯಾಣ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

Comments are closed.