ಕ್ರೀಡೆ

ನಕಲಿ ಡಿಗ್ರಿ ಸಾಬೀತು: ಟಿ-20 ನಾಯಕಿ ಹರ್ಮನ್‌ ಡಿವೈಎಸ್ಪಿ ಸ್ಥಾನಮಾನ ಹಿಂಪಡೆದ ಸರಕಾರ

Pinterest LinkedIn Tumblr

ಹೊಸದಿಲ್ಲಿ : ಭಾರತೀಯ ವನಿತೆಯರ ಟಿ-20 ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅವರಿಗೆ ನೀಡಲಾಗಿದ್ದ ಡಿವೈಎಸ್ಪಿ ಸ್ಥಾನಮಾನವನ್ನು ಪಂಜಾಬ್‌ ಸರಕಾರ ಹಿಂಪಡೆದುಕೊಂಡಿದೆ. ಹರ್ಮನ್‌ ಅವರ ಡಿಗ್ರಿ ನಕಲಿ ಎಂದು ಸಾಬೀತಾಗಿರುವುದೇ ಇದಕ್ಕೆ ಕಾರಣವಾಗಿದೆ. ಆಕೆಯನ್ನು ಕಾನ್‌ಸ್ಟೆಬಲ್‌ ಆಗಿ ಮಾತ್ರವೇ ಉಳಿಸಿಕೊಳ್ಳಲು ಸಾಧ್ಯ ಎಂದು ಪಂಜಾಬ್‌ ಸರಕಾರ ಹೇಳಿದೆ.

ಹರ್ಮನ್‌ ಪ್ರೀತ್‌ ಕೌರ್‌ ಅವರ ಪದವಿಯು ನಕಲಿ ಹೌದೇ ಅಲ್ಲವೇ ಎಂಬ ಬಗ್ಗೆ ಪಂಜಾಬ್‌ ಸರಕಾರ ತನಿಖೆ ಕೈಗೊಂಡಿತ್ತು. ತನಿಖೆಯಲ್ಲಿ ಪದವಿಯು ನಕಲಿ ಎಂದು ಸಾಬೀತಾಯಿತು. ಪರಿಣಾಮವಾಗಿ ಆಕೆಗೆ ಕೊಟ್ಟಿದ್ದ ಡಿವೈಎಸ್‌ಪಿ ಮಟ್ಟದ ಸ್ಥಾನಮಾನವನ್ನು ಸರಕಾರ ಹಿಂಪಡೆದುಕೊಂಡಿತು ಎಂದು ದ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಆದರೆ ಈ ವರೆಗೆ ಈ ಬಗ್ಗೆ ಸರಕಾರದಿಂದ ಹರ್ಮನ್‌ ಪ್ರೀತ್‌ ಕೌರ್‌ ಅವರಿಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ. “ಹರ್ಮನ್‌ ಅವರು ಇದೇ ಪದವಿ ಪತ್ರವನ್ನು ರೈಲ್ವೇ ಗೆ ಕೂಡ ಕೊಟ್ಟಿದ್ದರು. ಹಾಗಿರುವಾಗ ಅದು ನಕಲಿಯಾಗಿರಲು ಹೇಗೆ ಸಾಧ್ಯ ಎಂದು ಮ್ಯಾನೇಜರ್‌ ಪ್ರಶ್ನಿಸಿದರು.

ಪದವಿಗೆ ಸಂಬಂಧಿಸಿದ ವಿವಾದದ ಬಗ್ಗೆ ಸ್ಪಷ್ಟೀಕರಣ ಪಡೆಯಲು ಬಂದಿದ್ದ ಪತ್ರಕರ್ತರ ತಂಡವನ್ನು ಹರ್ಮನ್‌ ಅವರು ಮೊಹಾಲಿಯಲ್ಲಿನ ಕಾರ್ಯಕ್ರಮವೊಂದರ ವೇಳೆ ಒಂದು ತಾಸು ಕಾಯುವಂತೆ ಮಾಡಿದ್ದರು.

ತಾಸುಗಟ್ಟಲೆ ಆಕೆಯನ್ನು ಬೆಂಬತ್ತಿದ ಪತ್ರಕರ್ತರಿಗೆ ಕೊನೆಗೂ ಸಿಕ್ಕಿದ ಉತ್ತರ ಇಷ್ಟು : “ವಿವಾದದ ಬಗ್ಗೆ ನನಗೆ ಮಾಹಿತಿ ಇದೆ. ಸರಕಾರ ಆ ವಿಷಯವನ್ನು ಪರಿಶೀಲಿಸುತ್ತಿದೆ. ಸರಕಾರದಿಂದ ಧನಾತ್ಮಕ ಉತ್ತರವನ್ನು ನಾನು ಎದುರು ನೋಡುತ್ತಿದ್ದೇನೆ’.

Comments are closed.