ಮಂಗಳೂರು, ಜುಲೈ. 10 : ಮಂಗಳೂರು ನಿವಾಸಿ ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್ (81) ಅವರು ಇಂದು ಮುಂಜಾನೆ ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಗಿದ್ದ ಬಿ.ಎ. ಮೊಹಿದಿನ್ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಕಳೆದ ವಾರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾದ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುಂಜಾನೆ ಸುಮಾರು 6 ಗಂಟೆಗೆ ಅಲ್ಲಿ ನಿಧನರಾಗಿದ್ದಾರೆ.
ಸುಮಾರು 8 ಗಂಟೆಗೆ ಮೊಹಿದಿನ್ ಅವರ ಪ್ರಾರ್ಥಿವ ಶರೀರವನ್ನು ಬೆಂಗಳೂರಿನ ಸಂಜಯ ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಸುಮಾರು 11 ಗಂಟೆಯ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಬಳಿಕ ಮಂಗಳೂರಿಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಂಜೆ ಸ್ವಗೃಹಕ್ಕೆ ತಲುಪಲಿರುವ ಪ್ರಾರ್ಥವ ಶರೀರ :
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮುಂಜಾನೆ ನಿಧನರಾಗಿರುವ ಬಿ.ಎ. ಮೊಹಿದಿನ್ ಅವರ ಪ್ರಾರ್ಥವ ಶರೀರ 11 ಗಂಟೆಯ ಸುಮಾರಿಗೆ ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನಲ್ಲಿ ಮಂಗಳೂರಿಗೆ ಹೊರಡಲಿದೆ.
ಸಂಜೆ 6 ಗಂಟೆಯ ಸುಮಾರಿಗೆ ಮಂಗಳೂರು ಸಮೀಪದ ಬಜ್ಪೆಯಲ್ಲಿರುವ ಅವರ ಸ್ವಗೃಹಕ್ಕೆ ತಲುಪಲಿದೆ. ಬಳಿಕ ಬಜ್ಪೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿಗೆ ರಜೆ
ಮಾಜಿ ಸಚಿವ, ಹಿರಿಯ ರಾಜಕೀಯ ನೇತಾರ ಬಿ.ಎ.ಮೊಹಿದಿನ್ ನಿಧನರಾದ ಹಿನ್ನೆಲೆಯಲ್ಲಿ ಮೃತರ ಗೌರವಾರ್ಥ ಬಜ್ಪೆ, ಅಡ್ಡೂರು, ಗುರುಪುರ, ಎಡಪದವು, ಕುಪ್ಪೆಪದವು ಮತ್ತಿತರ ಪ್ರದೇಶಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ ಸಾರಲಾಗಿದೆ ಎಂದು ತಿಳಿದು ಬಂದಿದೆ.
ದ.ಕ.ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಬಿ.ಎ.ಮೊಹಿದಿನ್ರ ಶ್ರಮ ಅಪಾರವಾಗಿತ್ತು. ಆ ಹಿನ್ನೆಲೆಯಲ್ಲಿ ರಜೆ ಸಾರಲಾಗಿದೆ.
ಬಿಡುಗಡೆಗೆ ಸಿದ್ದವಾಗಿದೆ – ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’.
ಕರಾವಳಿಯ ಕಾಂಗ್ರೆಸ್ ಹಿರಿಯ ಬಿ.ಎ ಮೊಹಿದೀನ್ ಅವರ ಆತ್ಮಕಥೆ ‘ನನ್ನೊಳಗಿನ ನಾನು’. ಬಿಡುಗಡೆಗೆ ಸಿದ್ದವಾಗಿದೆ. ‘ನನ್ನೊಳಗಿನ ನಾನು’ ಬಿಡುಗಡೆಗೆ ಮುನ್ನವೇ ಕುತೂಹಲ ಸೃಷ್ಠಿಸಿದೆ. ಕರಾವಳಿಯಲ್ಲಿ ಕಾಂಗ್ರೆಸ್ ನಾಯಕರ ಸ್ಫೋಟಕ ಮಾಹಿತಿಗಳನ್ನು ತಮ್ಮ ಆತ್ಮಕಥೆಯಲ್ಲಿ ಬರೆದಿರುವ ಮೊಹಿದೀನ್ ಅವರು, ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ತಮ್ಮ ಆತ್ಮಕಥೆಯಲ್ಲಿ ತಮ್ಮ ನೋವನ್ನು ತೆರೆದಿಟ್ಟಿದ್ದಾರೆ.
ನನಗೀಗ 80 ವರ್ಷ ಪ್ರಾಯ. ಬದುಕಿನ ಮುಸ್ಸಂಜೆಯ ಹೊತ್ತು ಎಂದು ಆರಂಭಿಸುವ ಮೊಹಿದೀನ್ ಅವರು ತನ್ನ ಬಾಲ್ಯ, ಶಿಕ್ಷಣ, ಕಾಲೇಜಿನ ದಿನಗಳು , ಮದುವೆ ಎಲ್ಲವನ್ನೂ ಆತ್ಮಕಥೆಯಲ್ಲಿ ವಿವರಿಸಿದ್ದಾರೆ. ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡ ಮೊಹಿದಿನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿರಿಯ ನಾಯಕರ ವಿರುದ್ಧವೇ ತಮ್ಮ ಆತ್ಮಕಥೆಯಲ್ಲಿ ಗುಡುಗಿದ್ದಾರೆ.
ರಾಜಕೀಯದಲ್ಲಿ ಉಂಡ ಸಿಹಿ – ಕಹಿ ಘಟನೆಗಳನ್ನು ಮೊಹಿದೀನ್ ಅವರು 232 ಪುಟಗಳ ತನ್ನ ಆತ್ಮಕಥನದಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ. ತನ್ನ ಬದುಕಿನ ನೆನಪುಗಳನ್ನು ಅವರು ಹಂಚಿಕೊಂಡಿದ್ದ ‘ನನ್ನೊಳಗಿನ ನಾನು’ ಕೃತಿ ಇದೇ ತಿಂಗಳು 20 ಕ್ಕೆ ಬಿಡುಗಡೆಯಾಗಲಿದೆ. ‘ನನ್ನೊಳಗಿನ ನಾನು’ ಆತ್ಮಕಥೆಯ ನಿರೂಪಣೆಯ ಕಾರ್ಯವನ್ನು ಮಹಮ್ಮದ್ ಕುಳಾಯಿ ಮತ್ತು ಬಿ.ಎ. ಮೊಹಮ್ಮದ್ ಆಲಿ ವಹಿಸಿದ್ದಾರೆ.