ಕರಾವಳಿ

ಮುಂಬಯಿ ಕುಲಾಲ ಸಂಘದ ವತಿಯಿಂದ ಶೈಕ್ಷಣಿಕ ನೆರವು ವಿತರಣೆ

Pinterest LinkedIn Tumblr

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮವು ಇತ್ತೀಚಿಗೆ ಫೋರ್ಟ್‌ನ ಆಫ್‌ಜೋ ಹೌಸ್‌ರ ಮೊದಲ ಮಹಡಿಯಲ್ಲಿರುವ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ದೇವದಾಸ್‌ ಕುಲಾಲ್‌ ಇವರ ನೇತೃತ್ವದಲ್ಲಿ ನೆರವೇರಿತು.

ಕುಲಾಲ ಸಮಾಜದ ವಿದ್ಯಾರ್ಥಿಗಳು ಎಲ್ಲಾ ಶೈಕ್ಷಣಿಕ ರಂಗದಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಿಂದುಳಿದ ಸಮಾಜ ಎಂಬ ಖ್ಯಾತಿಯನ್ನು ಹೊಂದಿದ್ದ ಕುಲಾಲ ಸಮಾಜದ ಕೀರ್ತಿಯನ್ನು ಉತ್ತುಂಗಕ್ಕೇರಿಸುತ್ತಿರುವ ಸಮಾಜದ ವಿದ್ಯಾರ್ಥಿಗಳಿಗೆ ಕುಲಾಲ ಸಂಘದ ಪ್ರೋತ್ಸಾಹ, ಸಹಕಾರ ಸದಾ ಇದೆ ಎಂದು ಅವರು ನುಡಿದರು.

ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ನೀಡಿದ ನೆರವು ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಾಗಿದೆ. ಸಂಘದ ಬೃಹತ್‌ ಯೋಜನೆ ರೂಪುಗೊಂಡ ಬಳಿಕ ಅದರಿಂದ ಬರುವ ಆದಾಯದಲ್ಲಿ ಪ್ರತೀ ಸ್ಥಳೀಯ ಸಮಿತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯನ್ನು ನೀಡುವ ಉದ್ಧೇಶ ನಮ್ಮದಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒಲವನ್ನು ನೀಡಿ, ಸಮಾಜದ ಹೆಸರನ್ನು ಬೆಳಗಿಸಬೇಕು ಎಂದರು.

ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಇವರು ಮಾತನಡುತ್ತಾ, ಇಂದಿನ ವಿದ್ಯಾರ್ಥಿಗಳ ಫಲಿತಾಂಶವನ್ನು ನೋಡುವಾಗ ಸಂತಸವಾಗುತ್ತಿದೆ. ವಿದ್ಯಾರ್ಥಿಗಳಿಗೆ ಜ್ಯೋತಿ ಕೋ. ಆಪರೇಟಿವ್‌ ಸೊಸೈಟಿಯಿಂದ ಹಲವಾರು ಯೋಜನೆಗಳಿದ್ದು, ಇದರ ಸದುಪಯೋಗವನ್ನು ಸಮಾಜದ ಮಕ್ಕಳು ಪಡೆದುಕೊಳ್ಳಬೇಕು ಎಂದರು.

ಅತಿಥಿಯಾಗಿ ಆಗಮಿಸಿದ ಆ್ಯಂಕರ್‌ ಕಂಪೆನಿಯ ಆರ್ಥಿಕ ಸಲಹೆಗಾರ ಶ್ರೀಧರ ಬಂಗೇರ, ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ್‌ ವೈ. ಮೂಲ್ಯ, ಗೌರವ ಕೋಶಾಧಿಕಾರಿ ಜಯ ಅಂಚನ್‌, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕುಲಾಲ್‌ ಬಂಟ್ವಾಳ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ್ರಾ ಬಂಜನ್‌ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘದ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.