ಪ್ರಮುಖ ವರದಿಗಳು

ಹೈಟೆಕ್‌ ವೇಶ್ಯಾವಾಟಿಕೆ ಮೇಲೆ ದಾಳಿ ನಡೆಸಿ ಉದಯೋನ್ಮುಖ ನಟಿಯ ರಕ್ಷಣೆ

Pinterest LinkedIn Tumblr

ಹೈದರಾಬಾದ್‌: ಭಾರತೀಯ ಚಿತ್ರರಂಗದಲ್ಲಿರುವ ‘ಕಾಸ್ಟಿಂಗ್‌ ಕೌಚ್‌’ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಹೈದರಾಬಾದ್‌ ಪೊಲೀಸಧಿರು ನಗರದ ಪ್ರತಿಷ್ಠಿತ ಬಂಜಾರ ಹಿಲ್ಸ್‌ ಪ್ರದೇಶದ ಹೋಟೆಲ್‌ನಲ್ಲಿ ನಡೆಸಲಾಗುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ನಡೆಸಿ ಉದಯೋನ್ಮುಖ ನಟಿಯನ್ನು ರಕ್ಷಿಸಿದ್ದಾರೆ. ಸಂತ್ರಸ್ತ ನಟಿಯು ಆಗ್ರಾ ಮೂಲದವಳಾಗಿದ್ದು, ಈಗಷ್ಟೇ ಅವಕಾಶಗಳ ಬಾಗಿಲು ಬಡಿದು ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಳು ಎಂದು ತಿಳಿದುಬಂದಿದೆ.

ತೆಲುಗು ಚಿತ್ರ್ಯೋದ್ಯಮದಲ್ಲಿ ‘ಕಾಸ್ಟಿಂಗ್‌ ಕೌಚ್‌’ ಮೂಲಕ ನಟಿಯರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಈ ಹಿಂದೆ ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ ನಡೆಸುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ನ ಅನೇಕ ನಟಿಯರು ಕಾಸ್ಟಿಂಗ್‌ ಕೌಚ್‌ ವಿರುದ್ಧ ಧ್ವನಿಯೆತ್ತಿದ್ದರು. ನಟಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಜಾಲಗಳು ಬಂಜಾರ ಹಿಲ್ಸ್‌ನ ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದು, ಈಗ ಒಂದೊಂದೇ ಬಯಲಿಗೆ ಬರುತ್ತಿವೆ.

ಪೊಲೀಸರು ಇಂತಹ ದಂಧೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಅದರ ಭಾಗವಾಗಿ ಶನಿವಾರ ರಾತ್ರಿ ಬಂಜಾರ್‌ ಹಿಲ್ಸ್‌ ಪ್ರದೇಶದ ಪಂಚತಾರಾ ಹೋಟೆಲ್‌ ಮೇಲೆ ದಾಳಿ ನಡೆಸಿ ದಂಧೆಕೋರ ಚಿಲಕಗುಡದ ನಿವಾಸಿ ಅಂಬುಲಾ ಜನಾರ್ಧನ ರಾವ್‌ ಅಲಿಯಾಸ್‌ ಜಾನಿ ಹಾಗೂ ಗ್ರಾಹಕ ಅಮಿತ್‌ ಮಹೇಂದ್ರ ಶರ್ಮಾ(39)ನನ್ನು ಬಂಧಿಸಿದ್ದಾರೆ. ಶರ್ಮಾ ಹರಿಯಾಣದ ಗುರುಗ್ರಾಮ ಮೂಲದವನಾಗಿದ್ದು ವೃತ್ತಿಯಿಂದ ಸರಕಾರಿ ನೌಕರ ಎಂದು ತಿಳಿದುಬಂದಿದೆ. ರಾವ್‌ ಸಹವರ್ತಿ ಬಿ. ಪ್ರಶಾಂತ್‌ ತಲೆಮರೆಸಿಕೊಂಡಿದ್ದು ಅವನ ಶೋಧಕ್ಕೆ ಬಲೆ ಬೀಸಲಾಗಿದೆ.

ನಗದು ವಶ: ಬಂಧಿತರಿಂದ ಮೂರು ಮೊಬೈಲ್‌ ಹಾಗೂ 40,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅನ್ಯ ರಾಜ್ಯಗಳಿಂದ ವಿವಿಧ ಆಮಿಷವೊಡ್ಡಿ ನಟಿಯರು, ರೂಪದರ್ಶಿಯರನ್ನು ಕರೆತಂದು ಈ ದಂಧೆಗೆ ದೂಡುತ್ತಿದ್ದರು. ದಂಧೆಕೋರರು ನಟಿಯರಿಗೆ ವಾರಕ್ಕೆ 1 ಲಕ್ಷ ರೂ. ಹಣ ನೀಡಿ, ಬಳಿಕ ಗ್ರಾಹಕರಿಂದ ತಮಗೆ ಬೇಕಾದಷ್ಟು ಹಣ ಪೀಕುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಬಂಜಾರ್‌ ಹಿಲ್ಸ್‌ ಕುಖ್ಯಾತಿ

* ಜನವರಿಯಲ್ಲಿ ಇದೇ ರೀತಿಯ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಕುರಿಯನ್‌ ಥಾರಾಯಿಲ್‌ ಜಾಕೋಬ್‌ನನ್ನು ಬಂಧಿಸಿ ರಷ್ಯಾದ ಒಬ್ಬಳು, ಪಶ್ಚಿಮ ಬಂಗಾಳದ ಇಬ್ಬರು ನಟಿಯರನ್ನು ರಕ್ಷಿಸಲಾಗಿತ್ತು.

* ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 22 ವರ್ಷದ ಎಂಜಿನಿಯರಿಂಗ್‌ ಪದವೀಧರ ನೆಲ್ಲೂರಿನ ಶೇಖ್‌ ರೆಹಮಾನ್‌ನನ್ನು ಪೊಲೀಸರು ಜೂನ್‌ 1 ರಂದು ಬಂಧಿಸಿದ್ದರು.

* 2017ರ ಡಿಸೆಂಬರ್‌ನಲ್ಲಿ ಇದೇ ಬಂಜಾರ ಹಿಲ್ಸ್‌ನ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ದಾಳಿ ನಡೆಸಿ ಮುಂಬಯಿ ಮೂಲದ ಇಬ್ಬರು ನಟಿಯರು ಸೇರಿ ನಾಲ್ವರನ್ನು ರಕ್ಷಿಸಲಾಗಿತ್ತು.

ಅಮೆರಿಕದಲ್ಲೂ ಇದೇ ದಂಧೆ

ಕೆಲವು ವಾರಗಳ ಹಿಂದೆ ಅಮೆರಿಕದ ಷಿಕಾಗೋದಲ್ಲಿ ಹೈಟೆಕ್‌ ವೇಶ್ಯಾವ್ಯಾಟಿಕೆ ನಡೆಸುತ್ತಿದ್ದ ತೆಲುಗು ಚಿತ್ರ ನಿರ್ಮಾಪಕ ಕಿಶನ್‌ ಮುದುಗುಮುಡಿ ಹಾಗೂ ಚಂದ್ರ ದಂಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಭಾರತೀಯ ಕಾರ‍್ಯಕ್ರಮಗಳನ್ನು ಆಯೋಜಿಸುವ ನೆಪದಲ್ಲಿ ದಕ್ಷಿಣ ಭಾರತವೂ ಸೇರಿದಂತೆ ಅನೇಕ ಕಡೆಗಳಿಂದ ನಟಿಯರು, ರೂಪದರ್ಶಿಯರನ್ನು ಕರೆಸಿಕೊಂಡು ಬಳಿಕ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತನಿಖಾ ಸಂಸ್ಥೆಗಳು ಆರೋಪಿಸಿದ್ದವು.

Comments are closed.