ಕರಾವಳಿ

“ಶಿಕ್ಷೆಯನ್ನು ಸವಾಲಾಗಿ ಸ್ವೀಕರಿಸಿ, ಮುಂದೆ ಉತ್ತಮ ಜೀವನ ರೂಪಿಸಿ” : ಮಹಿಳಾ ಕೈದಿಗಳಿಗೆ ನ್ಯಾ|ಕೆ.ಎಸ್. ಬೀಳಗಿ ಸಲಹೆ

Pinterest LinkedIn Tumblr

ಮಂಗಳೂರು :ಯಾವ ಸಂದರ್ಭದಲ್ಲಿ ತಮ್ಮಿಂದ ಏನು ತಪ್ಪಾಗಿದೆ ಎಂಬುದು ತಪ್ಪು ಮಾಡಿದವರಿಗೆ ಮಾತ್ರ ತಿಳಿದಿರುತ್ತದೆ. ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಪ್ರಮೇಯವೂ ಜೀವನದಲ್ಲಿ ಎದುರಾಗಿರಬಹುದು. ಹಾಗಿದ್ದರೂ ತಮಗೆ ದೊರೆತ ಶಿಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಬೀಳಗಿಯರವರು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಮಹಿಳಾ ಕೈದಿಗಳಿಗೆ ಸಲಹೆ ನೀಡಿದ್ದಾರೆ.

ಅವರು ಜಿಲ್ಲಾಡಳಿತದ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಹಿಳಾ ಬಂಧಿಗಳು ಹಾಗೂ ಅವರ ಜತೆಯಲ್ಲಿರುವ ಮಕ್ಕಳಿಗೆ ಕಾನೂನು ಅರಿವು- ನೆರು ಅಭಿಯಾನದ ಸಮಾರೋಪ ಸಮಾರಂಭ ಹಾಗೂ ಯೋಗ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಮಕ್ಕಳಿಗೆ ಶಿಕ್ಷದ ವ್ಯವಸ್ಥೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾನತಾಡಿದರು.

ವಿಭಿನ್ನ ಸಂದರ್ಭಗಳಲ್ಲಿ ನಡೆದ ಘಟನೆಗಳಿಂದ ಜೈಲು ಸೇರಿ ಬಳಿಕ ಜೈಲಿನ ಅಧಿಕಾರಿಗಳು, ವಕೀಲರು, ಸಮಾಜದ ಮೂಲಕ ಶಿಕ್ಷೆಯಿಂದ ಬಿಡುಗಡೆಗೊಂಡ ಬಳಿಕ ಉತ್ತಮ ಜೀವನಕ್ಕೆ ಕಾರಣವಾದ, ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಂತಹ ಕೆಲ ಘಟನೆಗಳನ್ನು ಉದಾಹರಿಸಿ ಮಹಿಳಾ ಕೈದಿಗಳಲ್ಲಿ ಅವರು ಭರವಸೆ ಹಾಗೂ ಆತ್ಮವಿಶ್ವಾಸವನ್ನು ತುಂಬಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ. ಸುಂದರಿಯವರು ಕೈದಿಗಳಿಗೆ ತರಬೇತಿ ಅವಧಿಯಲ್ಲಿ ನೀಡಲಾದ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ತರಬೇತಿ ಅವಧಿಯಲ್ಲಿ ಇಬ್ಬರು ಮಹಿಳೆಯರು ಎಸೆಸೆಲ್ಸಿ ಹಾಗೂ ಪಿಯುಸಿ ಶಿಕ್ಷಣ ಮುಂದುವರಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರು ಟೈಲರಿಂಗ್ ಕಲಿಕೆಗೆ ಆಸಕ್ತಿ ತೋರಿಸಿದ್ದು, ಸ್ಯಾನಿಟರಿ ನ್ಯಾಪ್‌ಕಿನ್ ಹಾಗೂ ಬಟ್ಟೆಬರೆಯ ವ್ಯವಸ್ಥೆಗೂ ಮಹಿಳೆಯರಿಂದ ಬೇಡಿಕೆಗಳು ಬಂದಿವೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮಲ್ಲನಗೌಡ ಪಾಟೀಲ್, ಮಂಗಳೂರು ವಿಭಾಗದ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಡಿಸಿಪಿ ಹನುಮಂತರಾಯ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ. ಶಿವರಾಮಯ್ಯ, ಜೈಲು ಅಧೀಕ್ಷಕ ಸುರೇಶ್, ಆಯುಷ್ ಇಲಾಖೆಯ ಡಾ. ಶೋಭಾ ರಾಣಿ, ಡೀಡ್ಸ್ ಸಂಸ್ಥೆಯ ಹರಿಣಿ, ರೋಟರಿ ಕ್ಲಬ್‌ನ ಚೇತನ್ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

Comments are closed.