ಕರಾವಳಿ

ಸ್ಕಾರ್ಫ್ ವಿವಾದ : ಪ್ರಾಧ್ಯಾಪಕರು ಯಾವುದೇ ವಿದ್ಯಾರ್ಥಿನಿಯರ ಸ್ಕಾರ್ಪ್ ಎಳೆದಿಲ್ಲ -ಯಾರನ್ನೂ ಅಮಾನತು ಮಾಡಿಲ್ಲ : ಪ್ರಾಂಶುಪಾಲೆ ಸ್ಪಷ್ಟನೆ

Pinterest LinkedIn Tumblr

ಮಂಗಳೂರು, ಜೂನ್. 30: ಕಾಲೇಜಿನ ನಿಯಮಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರವನ್ನು ಧರಿಸಬೇಕು ಮತ್ತು ಅದಕ್ಕೆ ಹೊರತಾದ ಬೇರೆ ಯಾವುದೇ ಉಡುಗೆ ತೊಡುಗೆಯನ್ನು ಧರಿಸಬಾರದು. ಯಾವುದೇ ವಿದ್ಯಾರ್ಥಿನಿ ಸ್ಕಾರ್ಫ್ ಧರಿಸುವಂತಿಲ್ಲ. ಮುಖವನ್ನು ಮುಚ್ಚಿಕೊಳ್ಳುವಂತಿಲ್ಲ. ಸಮವಸ್ತ್ರಕ್ಕೆ ಹೊರತಾದ ಬೇರೆ ಯಾವುದೇ ಉಡುಗೆಯನ್ನು ತರಗತಿಯಲ್ಲಿ ತೊಡುವಂತಿಲ್ಲ. ಇದನ್ನು ಹ್ಯಾಂಡ್‌ಬುಕ್‌ನಲ್ಲಿ ಸ್ಪಷ್ಟಪಡಿಸಲಾಗಿದ್ದು, ಪಾಲಿಸುವುದು ವಿದ್ಯಾರ್ಥಿನಿಯರ ಕರ್ತವ್ಯವಾಗಿದೆ ಎಂದು ಸಂತ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಜೆಸ್ವಿನಾ ಹೇಳಿದ್ದಾರೆ.

ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಹಲವು ವರ್ಷಗಳಿಂದ ವಸ್ತ್ರಸಂಹಿತೆಯ ನೀತಿ ಜಾರಿಯಲ್ಲಿದ್ದು, ಅದು ಈ ವರ್ಷ ರೂಪಿಸಿದ್ದೇನೂ ಅಲ್ಲ.

ವಸ್ತ್ರಸಂಹಿತೆ ಸಹಿತ ಕಾಲೇಜಿನ ನೀತಿ ನಿಯಮಗಳನ್ನು ವಿದ್ಯಾರ್ಥಿ ಹಾಗೂ ಪೋಷಕರ ಗಮನಕ್ಕೆ ತರುವುದಕ್ಕಾಗಿಯೇ ಪ್ರತಿ ವರ್ಷವೂ ಕಾಲೇಜಿನ ಹ್ಯಾಂಡ್ ಬುಕ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಅಲ್ಲದೆ ಕಾಲೇಜಿನ ಪ್ರವೇಶದ ಸಂದರ್ಭ ನೀತಿ ನಿಯಮಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಿ ಮಾಡುತ್ತಾರೆ. ಹೀಗಿರುವಾಗ ಪಿಎಫ್‌ಐ ಸಂಘಟನೆಯ ಜೊತೆ ಸೇರಿ ಕೆಲವು ವಿದ್ಯಾರ್ಥಿನಿಯರು ಪ್ರತಿಭಟಿಸುವುದು ಮತ್ತು ನಿಯಮಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಜೆಸ್ವಿನಾ ಹೇಳಿದರು.

ತರಗತಿಯೊಳಗೆ ಸ್ಕಾರ್ಫ್ ಹಾಕದಂತೆ ಸೂಚಿಸಲಾಗಿದೆಯೇ ವಿನಃ ಕಾಲೇಜಿನ ಆವರಣದೊಳಗೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ವಿರೋಧಿಸಿಲ್ಲ. ಆದರೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ವಿರುದ್ಧ ಸಂದೇಶ ಹರಿದು ಬಿಡಲಾಗುತ್ತದೆ. ಇದರಲ್ಲಿ ಸತ್ಯಾಂಶವಿಲ್ಲ. ಕೆಲವರು ತಿಳಿಸಿದಂತೆ ನಮ್ಮಲ್ಲಿ ಶೇ.80ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರಿಲ್ಲ. ಬದಲಾಗಿ ಶೇ.28ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಅಲ್ಲದೆ ಸುಮಾರು 100 ವಿದ್ಯಾರ್ಥಿನಿಯರಿಗೆ ಅಂದಾಜು 2 ಲಕ್ಷ ರೂ. ರಿಯಾಯಿತಿ ನೀಡಲಾಗಿದೆ ಎಂದು ಪ್ರಾಂಶುಪಾಲೆ ಡಾ. ಎಂ. ಜೆಸ್ವಿನಾ ಹೇಳಿದರು.

ಕಾಲೇಜಿನ ಪ್ರಾಧ್ಯಾಪಕರು ಯಾವುದೇ ಸಂದರ್ಭದಲ್ಲೂ ಕೂಡಾ ಯಾವುದೇ ವಿದ್ಯಾರ್ಥಿನಿಯರ ಸ್ಕಾರ್ಪ್ ಎಳೆದಿಲ್ಲ. ಈ ಘಟನೆ ಬಳಿಕ ಯಾವುದೇ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತು ಮಾಡಿಲ್ಲ. ಜೂನ್ 25ರಂದು ಕಾಲೇಜಿನ ಗೇಟಿನ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಮತ್ತು ಅಂದು ಮಾಧ್ಯಮದ ಮುಂದೆ ಮಾತನಾಡಿದ ತೃತೀಯ ಬಿಕಾಂ ವಿದ್ಯಾರ್ಥಿನಿ ಫಾತಿಮಾ ಅನೀಸ್ ಮರುದಿನದಿಂದಲೇ ಕಾಲೇಜು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಎಲ್ಲಾ ತರಗತಿಗಳಿಗೂ ಹಾಜರಾಗುತ್ತಿದ್ದಾರೆ.

ಕಾಲೇಜಿನ ನಿಯಾಮಾವಳಿಗಳ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯರಿಂದ ಅವರ ಹೆತ್ತವರ ಸಮ್ಮುಖದಲ್ಲಿ 3 ದಿನಗಳೊಳಗೆ ಲಿಖಿತ ಸ್ಪಷ್ಟನೆಯನ್ನು ನೀಡಬೇಕೆಂದು ಸೂಚಿಸಲಾಗಿತ್ತೇ ಹೊರತು ಕಾಲೇಜಿನ ಪ್ರಾಂಶುಪಾಲೆಯಾಗಿ ನಾನು ಅಥವಾ ಯಾವುದೇ ಪ್ರಾಧ್ಯಾಪಕರು ಖಾಲಿ ಕಾಗದದ ಮೇಲೆ ವಿದ್ಯಾರ್ಥಿನಿಯರ ಸಹಿ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿಕೊಂಡು ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ಧರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಳ್ಳಬಹುದು. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಪ್ರಾಂಶುಪಾಲೆ ಡಾ.ಎಂ.ಜೆಸ್ವಿನಾ ಹೇಳಿದರು.

ಕಾಲೇಜಿನ ಜೊತೆ ಕಾರ್ಯದರ್ಶಿ ಡಾ. ಮರಿಯಾ ರೂಪಾ, ಉಪ ಪ್ರಾಂಶುಪಾಲೆ ಡಾ. ವೆನಿಸ್ಸಾ, ರಿಜಿಸ್ಟ್ರಾರ್ ಚಾರ್ಲ್ಸ್ ಸ್ಟಾನಿ ಪಾಯ್ಸಾ, ಶಿಸ್ತು ಸಮಿತಿಯ ಸಂಯೋಜಕಿ ಡಾ. ದೇವಿ ಪ್ರಭಾ ಆಳ್ವ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ನೀನಾ, ಹಳೆ ವಿದ್ಯಾರ್ಥಿನಿ ನಯನಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.