ಕರಾವಳಿ

ಮಂಗಳೂರು ಸ್ಕಾರ್ಫ್ ವಿವಾದಕ್ಕೆ ಹೊಸ ತಿರುವು : ಸೈಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಗೆ ವಿದೇಶದಿಂದ ಬೆದರಿಕೆ ಕರೆ

Pinterest LinkedIn Tumblr

ಮಂಗಳೂರು, ಜೂನ್. 30: ಸೈಂಟ್ ಆಗ್ನೆಸ್ ಕಾಲೇಜಿನ ಸ್ಕಾರ್ಫ್ ವಿವಾದದ ಮಧ್ಯೆಯೇ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ವಿಧ್ಯಾರ್ಥಿನಿಯೋರ್ವಳಿಗೆ ವಿದೇಶದಿಂದ ಅನಾಮಿಕ ಬೆದರಿಕೆ ಕರೆ ಬರುವ ಮೂಲಕ ಹೊಸ ವಿವಾದವೊಂದು ಸೃಷ್ಠಿಯಾಗಿದೆ.

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ ‘ಜಸ್ಟೀಸ್ ಫಾರ್ ಸ್ಕಾರ್ಫ್ ಆಯಂಡ್ ನಮಾಝ್’ ವಾಟ್ಸ್‌ಆಯಪ್ ಗ್ರೂಪ್‌ನಿಂದ ಹೊರ ಹೋದುದಕ್ಕೆ ತನಗೆ ವಿದೇಶದಿಂದ ಅನಾಮಿಕ ಬೆದರಿಕೆ ಕರೆ ಬರುತ್ತಿದೆ ಎಂದು ಸಂತ ಆಯಗ್ನೆಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನೌರೀನ್ ಎಂಬವರು ಆರೋಪಿಸಿದ್ದಾರೆ.

ಸಂತ ಆಯಗ್ನೆಸ್ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಲೇಜಿನ ಪ್ರಾಂಶುಪಾಲೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೌರೀನ್ ತನ್ನನ್ನು ಈ ಗ್ರೂಪ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ. ಅಲ್ಲದೆ ಅದರಲ್ಲಿ ಚರ್ಚೆಯಾಗುತ್ತಿರುವ ಮಧ್ಯೆಯೇ ಗ್ರೂಪ್‌ನಿಂದ ಹೊರ ಹೋಗಿದ್ದೆ. ಈ ಮಧ್ಯೆ ವಿದೇಶದಿಂದ ತನಗೆ ಅನಾಮಿಕ ಬೆದರಿಕೆ ಕರೆ ಬಂದಿದೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲೆ ಡಾ.ಎಂ.ಜೆಸ್ವಿನಾ ಮಾತನಾಡಿ ಕಾಲೇಜಿನ ಪ್ರಾಧ್ಯಾಪಕರು ಯಾವುದೇ ಸಂದರ್ಭ ಯಾವುದೇ ವಿದ್ಯಾರ್ಥಿನಿ ಸ್ಕಾರ್ಫ್ ಎಳೆದಿಲ್ಲ. ತರಗತಿಯೊಳಗೆ ಸ್ಕಾರ್ಫ್ ಹಾಕದಂತೆ ಸೂಚಿಸಲಾಗಿದೆ. ಆದರೆ, ಸಂಸ್ಥೆಯ ಆವರಣದೊಳಗೆ ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ವಿರೋಧವಿಲ್ಲ. ಮೊನ್ನೆ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮದ ಮುಂದೆ ಮಾತನಾಡಿದ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಅನಿಸ್ ಮರುದಿನದಿಂದಲೇ ಕಾಲೇಜು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಎಲ್ಲ ತರಗತಿಗಳಿಗೂ ಹಾಜರಾಗಿದ್ದಾರೆ. ಪ್ರತಿಭಟಿಸಿದ ವಿದ್ಯಾರ್ಥಿನಿಯರ ಅವರ ಹೆತ್ತವರ ಸಮ್ಮುಖದಲ್ಲಿ ಮೂರು ದಿನದೊಳಗೆ ಲಿಖಿತ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿಲಾಗಿದೆ. ನಾವ್ಯಾರು ಖಾಲಿ ಕಾಗದದ ಮೇಲೆ ವಿದ್ಯಾರ್ಥಿನಿಯರಿಂದ ಸಹಿ ಪಡೆದುಕೊಂಡಿಲ್ಲ ಎಂದು ಹೇಳಿದರು.

ವಿದ್ಯಾರ್ಥಿನಿ ಫಾತಿಮಾ ಅನೀಸ್‌ರ ತಂದೆ ಅನೀಸ್ ಮಾತನಾಡಿ ಸ್ಕಾರ್ಫ್ ವಿವಾದವನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲೆ, ವಿದ್ಯಾರ್ಥಿನಿಯರು ಹಾಗೂ ಪೋಷಕರು ಕೂತು ಬಗೆಹರಿಸಬಹುದಿತ್ತು. ಅದನ್ನು ಕಾಲೇಜಿನ ಹೊರಗಡೆ ವಿವಾದ ಮಾಡಿರುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಜೊತೆ ಕಾರ್ಯದರ್ಶಿ ಡಾ. ಮರಿಯಾ ರೂಪಾ, ಉಪ ಪ್ರಾಂಶುಪಾಲೆ ಡಾ. ವೆನಿಸ್ಸಾ, ರಿಜಿಸ್ಟ್ರಾರ್ ಚಾರ್ಲ್ಸ್ ಸ್ಟಾನಿ ಪಾಯ್ಸಾ, ಶಿಸ್ತು ಸಮಿತಿಯ ಸಂಯೋಜಕಿ ಡಾ. ದೇವಿ ಪ್ರಭಾ ಆಳ್ವ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ನೀನಾ, ಹಳೆ ವಿದ್ಯಾರ್ಥಿನಿ ನಯನಾ ಉಪಸ್ಥಿತರಿದ್ದರು.

Comments are closed.