ಕರಾವಳಿ

ಮಂಗಳೂರು: ಸ್ಕಾರ್ಫ್ ವಿವಾದ – ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ

Pinterest LinkedIn Tumblr

(ಪ್ರತಿಭಟನೆಯ ಚಿತ್ರ)

ಮಂಗಳೂರು : ಸ್ಕಾರ್ಫ್ ಧರಿಸದಂತೆ ತಡೆಯೊಡ್ಡಿದ ಸಂತ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ ಹಲವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ನೋಟಿಸ್ ಜಾರಿಗೊಳಿಸಿದ್ದು, ಮೂರು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.

ಈ ಮಧ್ಯೆ ಕೆಲವು ಮುಸ್ಲಿಂ ಸಂಘಟನೆಗಳ ಮುಖಂಡರು ಗುರುವಾರ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದೆ. ಅಲ್ಲದೆ ನೋಟಿಸ್ ಜಾರಿಯಿಂದ ವಿವಾದ ತಣ್ಣಗಾಗುವ ಬದಲು ಪ್ರತಿಭಟನೆಯ ಕಾವು ಪಡೆಯುತ್ತಿದೆ. ಗುರುವಾರ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಸಿಎಫ್‌ಐ ಪ್ರತಿಭಟನೆ ನಡೆಸಿದೆ.

ಕಾಲೇಜಿನ ಆಡಳಿತ ಮಂಡಳಿಯು ಸ್ಕಾರ್ಫ್ ಧರಿಸದಂತೆ ಕಿರುಕುಳ ನೀಡುತ್ತದೆ ಎಂದು ಆರೋಪಿಸಿ ಕಳೆದ ಸೋಮವಾರ ಹಲವು ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೂಡ ಬೆಂಬಲ ವ್ಯಕ್ತಪಡಿಸಿದ್ದವು.

ಮಂಗಳವಾರ ಕೂಡ ಸ್ಕಾರ್ಫ್ ಧರಿಸಿ ಹೋದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಬದಲಾಗಿ ಪ್ರತಿಭಟನೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು.

ಈ ಮಧ್ಯೆ ಕೆಲವು ವಿದ್ಯಾರ್ಥಿನಿಯರು ಮತ್ತು ಪೋಷಕರು ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಸುದ್ದಿಗೋಷ್ಠಿಯನ್ನೂ ನಡೆಸಿ ಗಮನ ಸೆಳೆದಿದ್ದರು. ಆದರೆ ಆಡಳಿತ ಮಂಡಳಿಯು ತನ್ನ ನಿಲುವಿಗೆ ಅಂಟಿಕೊಂಡಿದೆ. ಅಲ್ಲದೆ ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್ ಜಾರಿಗೊಳಿಸಿದ್ದಾರೆ.

Comments are closed.