ಕರಾವಳಿ

ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸ್ಕಾರ್ಫ್‌ಗೆ ನಿರ್ಬಂಧ : ಮುಸ್ಲಿಂ ಮುಖಂಡರ ಸಭೆ : ಕಾಲೇಜು ಸ್ಪಂದಿಸದಿದ್ದಲ್ಲಿ ಬೃಹತ್ ಹೋರಾಟ

Pinterest LinkedIn Tumblr

ಮಂಗಳೂರು, ಜೂನ್. 29: ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಭುಗಿಲೆದ್ದ ಸ್ಕಾರ್ಫ್ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರಿನ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿನಿಯರು ಮತ್ತು ಪೋಷಕರೊಂದಿಗೆ ಸಭೆ ನಡೆಸಲಾಯಿತು.

ಸಭೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಲೇಜಿನಲ್ಲಿ ನಡೆದಂತಹ ಎಲ್ಲ ಘಟನೆಗಳ ಬಗ್ಗೆ ವಿದ್ಯಾರ್ಥಿನಿಯೋರ್ವಳು ಮಾತನಾಡಿ, ‘ಕಾಲೇಜಿನಲ್ಲಿ ಇಷ್ಟರವರೆಗೆ ಇಲ್ಲದಂತಹ ಕೆಲವು ನಿಯಮಗಳನ್ನು ವಿದ್ಯಾರ್ಥಿನಿಯರ ಮೇಲೆ ಹೇರುತ್ತಿದ್ದು, ಸ್ಕಾರ್ಫ್ ಮತ್ತು ನಮಾಝ್ ನಿರ್ವಹಿಸಲು ಕೂಡ ಪ್ರಾಂಶುಪಾಲರು ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತು ನಾವು ಕೇಳಲು ಹೋದಾಗ ನಮ್ಮನ್ನು ಗಣನೆಗೆ ತೆಗೆಯದೆ ಹೆದರಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೀಗ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಮೇಲೆ ಕೆಲವೊಂದು ನೋಟಿಸ್‌ಗಳನ್ನು ನೀಡಿ, ನಮ್ಮ ಕ್ಯಾಲೆಂಡರ್‌ಗಳನ್ನು ಹಿಂಪಡೆದು, ಕಿರುಕುಳ ನೀಡುತ್ತಿದ್ದಾರೆ ಎಂದು ಮುಖಂಡರ ಬಳಿ ಅಳಲನ್ನು ತೋಡಿಕೊಂಡರು. ವಿದ್ಯಾರ್ಥಿನಿಯರು ವಿವರಿಸಿದ ಘಟನೆಗಳ ಆಧಾರದಲ್ಲಿ, ಮುಖಂಡರು ಗಂಭೀರ ಚರ್ಚೆಯನ್ನು ನಡೆಸಿ, ಈ ವಿವಾದವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ನಿರ್ಧಾರಗಳು: ಈಗಾಗಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿಯ ಮೂಲಕ ಮಾಹಿತಿ ನೀಡಲಾಗಿದ್ದು, ಜಿಲ್ಲೆಯ ಸಚಿವ ಯು.ಟಿ ಖಾದರ್ ಅವರು ಈ ಎಲ್ಲ ಅಧಿಕಾರಿಗಳನ್ನು ಮತ್ತು ವಿದ್ಯಾರ್ಥಿನಿಯರನ್ನು ಹಾಗೂ ಪೋಷಕರನ್ನು ಸೇರಿಸಿಕೊಂಡು ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಭೆ ಕರೆಯುವ ಬಗ್ಗೆ ಒತ್ತಾಯಿಸುವುದು. ‘

ಮಂಗಳೂರು ಪೋಲಿಸ್ ವರಿಷ್ಠಾಧಿಕಾರಿ ಕೂಡ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಮುಗಿಸುವ ಬಗ್ಗೆ ಪ್ರಯತ್ನಿಸಬೇಕು. ಈ ಎಲ್ಲ ಬೆಳವಣಿಗೆಯಲ್ಲಿ ಕಾಲೇಜು ಆಡಳಿತ ಮಂಡಳಿಯು ಸ್ಪಂದಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರನ್ನು ಒಗ್ಗೂಡಿಸಿ ಬೃಹತ್ ಹೋರಾಟವನ್ನು ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮುಸ್ಲಿಂ ಮುಖಂಡರಾದ ಮಾಜಿ ಮೇಯರ್ ಅಶ್ರಫ್, ಸುಹೈಲ್ ಖಂದಕ್, ಹನೀಫ್ ಖಾನ್ ಕೋಡಾಜೆ, ರಫೀಯುದ್ದೀನ್ ಕುದ್ರೋಳಿ, ಅತಾವುಲ್ಲಾ ಜೋಕಟ್ಟೆ, ನವಾಝ್ ಉಳ್ಳಾಲ, ನಝೀರ್ ಅಹ್ಮದ್, ಇಕ್ಬಾಲ್ ಮುಲ್ಕಿ, ಮುಹಮ್ಮದ್ ಸಲೀಂ, ಜಾಫರ್ ಸಾದಿಕ್ ಫೈಝಿ, ಮುಹಮ್ಮದ್ ತಫ್ಸೀರ್, ಮುನೀಬ್ ಬೆಂಗ್ರೆ , ರಶೀದ್ , ಅಹ್ಮದ್ ಬಾವ ಮುಂತಾದವರು ಉಪಸ್ಥಿತರಿದ್ದರು.

Comments are closed.