ಕರಾವಳಿ

ಮೂಲರಪಟ್ಣದಲ್ಲಿ ನಬಾರ್ಡ್‌ ಯೋಜನೆಯಡಿ ಮಳೆಗಾಲದ ಅನಂತರ ಸೇತುವೆ ನಿರ್ಮಾಣಕ್ಕೆ ಕ್ರಮ : ಸಂಸದ ನಳಿನ್‌ ಕುಮಾರ್

Pinterest LinkedIn Tumblr

ಮಂಗಳೂರು: ಮೂಲರಪಟ್ಣದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ನಬಾರ್ಡ್‌ ಯೋಜನೆಯಡಿ ಅನುದಾನ ಒದಗಿಸಲಾಗುತ್ತದೆ. ಮಳೆಗಾಲದ ಅನಂತರ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅವರು ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಅವರ ಜೊತೆ ಮೂಲರಪಟ್ಣ ಸೇತುವೆ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಇಲ್ಲಿನ ತೂಗುಸೇತುವೆಯಲ್ಲಿ ಜನಸಂಚಾರಕ್ಕೆ ಅನುವುಮಾಡಿಕೊಡಲು ಸೂಚಿಸಲಾಗಿದೆ. ಸುರಕ್ಷಾ ದೃಷ್ಟಿಯಿಂದ ತೂಗು ಸೇತುವೆಯ ಎರಡೂ ಬದಿ ಪೊಲೀಸ್‌ ನಿಯೋಜಿಸಲು ಮತ್ತು ಸೇತುವೆಯಲ್ಲಿ ಒಮ್ಮೆಗೆ 25 ಮಂದಿ ಮಾತ್ರ ನಡೆದು ಹೋಗಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಮಾತನಾಡಿ, ಹೆದ್ದಾರಿಯಿಂದ ತೂಗು ಸೇತುವೆ ಬಳಿಗೆ ಪರ್ಯಾಯ ರಸ್ತೆ ನಿರ್ಮಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಕುಸಿತದ ಸೇತುವೆಯ ಎರಡೂ ಬದಿಗೆ ಬಸ್‌ಗಳು ಬಂದು ಹೋಗುವಂತೆ ಆರ್‌.ಟಿ.ಒ. ಅಧಿಕಾರಿಗಳ ಮೂಲಕ ಸೂಚಿಸಲಾಗುವುದು. ಮುತ್ತೂರಿನ ನೋಣಾಲು, ಬಂಟ್ವಾಳದ ಬಡಗಬೆಳ್ಳೂರು ತನಕ ಖಾಸಗಿ ವಾಹನಗಳು ತೂಗು ಸೇತುವೆ ಸನಿಹಕ್ಕೆ ಬರುವಂತಾಗಲು ರಸ್ತೆ ಸಂಪರ್ಕ ದುರಸ್ತಿಗೆ ಪಿಡಬ್ಲ್ಯುಡಿ ಕ್ರಮ ಕೈಗೊಳ್ಳಲಿದೆ. ಮೂಲರಪಟ್ಣದ ಖಾಸಗಿ ಜಮೀನಿನಲ್ಲಿ 3 ತಿಂಗಳ ಅವಧಿಗೆ ರಸ್ತೆ ನಿರ್ಮಿಸಲು ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಸೇತುವೆ ಮರುನಿರ್ಮಾಣವಾಗುವ ತನಕ ತೂಗು ಸೇತುವೆಯೇ ಅಧಾರ..!

ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ಮೂಲರಪಟ್ಣ ನದಿಯ ಬದಿಯಲ್ಲಿ ಲೊಕೋಪಯೋಗಿ ಇಲಾಖೆ ಮಂಗಳವಾರ ದುರಸ್ತಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಸಹಾಯಕ ಕಮಿಷನರ್‌ ರೇಣುಕಾ ಪ್ರಸಾದ್‌, ಮಂಗಳೂರು ಪಿಡಬ್ಲ್ಯುಡಿ ಎಂಜಿನಿಯರ್‌ ಗೋಕುಲ್‌ದಾಸ್‌, ರವಿ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿದರು.

ಫಲ್ಗುಣಿ ನದಿಗೆ ಕಟ್ಟಿರುವ ಈ ತೂಗು ಸೇತುವೆ ಬಡಗಬೆಳ್ಳೂರು – ಮುತ್ತೂರು ಗ್ರಾ.ಪಂ. ನಡುವೆ ಸಂಪರ್ಕ ಉದ್ದೇಶದಿಂದ ನಿರ್ಮಾಣ ಆಗಿದ್ದು 2016 ಆ. 11 ರಂದು ಉದ್ಘಾಟನೆ ಆಗಿತ್ತು. ಬಡಗಬೆಳ್ಳೂರು ಪ್ರದೇಶದ ನೂರಾರು ಮಂದಿಗೆ ಇದರಿಂದ ಸಹಕಾರ ಆಗಿತ್ತು. ಈಗಲೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಮೂಲಕ ಸಂಚರಿಸುತ್ತಾರೆ. ಮುತ್ತೂರು ನೋಣಾಲಿನ ವಿದ್ಯಾರ್ಥಿಗಳು ಬಂಟ್ವಾಳದ ಶಾಲೆ – ಕಾಲೇಜುಗಳಿಗೆ ಬರುತ್ತಿದ್ದು ಸೇತುವೆ ಮರುನಿರ್ಮಾಣವಾಗುವ ತನಕ ಶಾಲೆಗೆ ಸಕಾಲದಲ್ಲಿ ಹಾಜರಿ ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

Comments are closed.