ಕರಾವಳಿ

ವಾಮಂಜೂರು ಗುಜಿರಿ ವ್ಯಾಪಾರಿ ಮೇಲಿನ ಹಲ್ಲೆ ಪ್ರಕರಣ : ಪೊಲೀಸರ ತುರ್ತು ಕಾರ್ಯಾಚರಣೆ -ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು, ಜೂನ್.25: ವಾಮಂಜೂರಿನಲ್ಲಿ ನಿನ್ನೆ ಗುಜಿರಿ ವ್ಯಾಪಾರಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಗ್ರಾಮಾಂತರ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗುರುಪುರ ಬಂಗ್ಲೆಗುಡ್ಡೆ ನಿವಾಸಿ ನವಾಝ್ ಯಾನೆ ನವ್ವಾ (25) ಹಾಗೂ ಮೂಡುಶೆಡ್ಡೆ ನಿವಾಸಿ ಮೊಹಮ್ಮದ್ ಶಾರೂಖ್ ಯಾನೆ ಶರು (22) ಎಂದು ಗುರುತಿಸಲಾಗಿದೆ.

ವಾಮಂಜೂರಿನಲ್ಲಿ ಕಳೆದ 30 ವರ್ಷಗಳಿಂದ ಗುಜಿರಿ ಅಂಗಡಿ ನಡೆಸುತ್ತಿರುವ ವಾಮಂಜೂರು ನಿವಾಸಿ ಖಾಲೀದ್ ಉಳಾಯಿಬೆಟ್ಟು (52) ಎಂಬವರ ಮೇಲೆ ರವಿವಾರ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಿತ್ತು.

ಖಾಲೀದ್ ಅವರು ನಿನ್ನೆ ಸಂಜೆ 5:30ರ ಸುಮಾರಿಗೆ ತನ್ನ ಗುಜಿರಿ ಅಂಗಡಿಗೆ ಬೀಗ ಹಾಕಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿಯ ತಂಡ ಖಾಲೀದ್ ಅವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು.

”ತನ್ನನ್ನು ನೋಡಲು ಜೈಲಿಗೆ ಯಾಕೆ ಬರಲಿಲ್ಲ. ಹಫ್ತಾ ಯಾಕೆ ಕಟ್ಟುತ್ತಿಲ್ಲ ಎಂದು ವಾಮಂಜೂರಿನ ರಾಯ್ಫಿ ಹನೀಫ್ (20) ಎಂಬಾತ ಪ್ರಶ್ನಿಸಿದ್ದ. ಈ ವೇಳೆ ನಾನೇಕೆ ಹಫ್ತಾ ಕಟ್ಟಬೇಕೆಂದು ಕೇಳಿದ್ದಕ್ಕೆ ದುಷ್ಕರ್ಮಿಗಳು ಕುತ್ತಿಗೆ ತಲವಾರು ಹಿಡಿದು, ಹಲ್ಲೆ ನಡೆಸಿ, ಬಾಟಲ್‌ನಿಂದ ತಲೆಗೆ ಹೊಡೆದಿದ್ದಾರೆ. ತನ್ನ ಕಾರನ್ನು ಪುಡಿಗೈದಿದ್ದಾರೆ” ಎಂದು ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಖಾಲೀದ್‌ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಗ್ರಾಮಾಂತರ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಬಂಧಿತರು ಕೊಲೆ ಪ್ರಕರಣದ ಆರೋಪಿಗಳು :

ಬಂಧಿತ ಆರೋಪಿಗಳಾದ ನವಾಝ್ ಯಾನೆ ನವ್ವಾ ಹಾಗೂ ಮೊಹಮ್ಮದ್ ಶಾರೂಖ್ ಯಾನೆ ಶರು 2016ರಲ್ಲಿ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ನಡೆದ ಚರಣ್ ಕೊಲೆ ಪ್ರಕರಣದ ಆರೋಪಿಗಳೆಂದು ತಿಳಿದು ಬಂದಿದ್ದು, ಚರಣ್ ಹತ್ಯೆ ಹಾಗೂ ಖಾಲೀದ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಒಂದೇ ತಂಡದ ಸದಸ್ಯರಿರ ಬೇಕೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.