ಕರ್ನಾಟಕ

ಕುಖ್ಯಾತ ಸರಗಳ್ಳನನ್ನು ಹಿಡಿದ ಹೆಡ್‌ಕಾನ್ಸ್‌ಟೆಬಲ್‌ಗೆ 1 ಲಕ್ಷ, ಪಲ್ಸರ್ ಬೈಕ್, ಫ್ಯಾಮಿಲಿ ಟ್ರಿಪ್

Pinterest LinkedIn Tumblr

ಬೆಂಗಳೂರು: ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಚಂದ್ರಕುಮಾರ್ ಅವರ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಯಿತು. ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಬಂಧಿಸಿದ್ದ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್ ಅವರನ್ನು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಇಂದು ಸನ್ಮಾನಿಸಿದರು.

1 ಲಕ್ಷ ರೂ. ನಗದು, ಒಂದು ಪಲ್ಸರ್ ಬೈಕ್ ಅನ್ನು ಬಹುಮಾನವಾಗಿ ನೀಡಿದ್ದು ಮಾತ್ರವಲದೇ ಪೊಲೀಸ್ ಸಿಬಂದಿಗೆ ರಜೆ ನೀಡಿ ಕುಟುಂಬ ಸಮೇತ ಪ್ರವಾಸ ಹೋಗಲು ‘ಸೂಪರ್ ಆಫರ್’ ನೀಡಿದ್ದಾರೆ. ಸೋಮವಾರದಂದು ಜ್ಞಾನ ಭಾರತಿ ಪೊಲೀಸ್ ಠಾಣೆಯ ಮುಖ್ಯಪೇದೆ ಚಂದ್ರಕುಮಾರ್ ಅವರನ್ನು ಸನ್ಮಾನಿಸಿದರು.

ಜೂನ್ 17ರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಅವರ ಬೈಕ್ ಹಿಂಬಾಲಿಸಿದ್ದ ಚಂದ್ರಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದು ಅಚ್ಚುತ್ ಕುಮಾರ್ ಕೆಳಗೆ ಬೀಳಿಸಿ ಅವರನ್ನು ಬಂಧಿಸಿ ಸಾಹಸ ಮೆರೆದಿದ್ದರು.

ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಮೇಲಾಧಿಕಾರಿಗಳು ನೀಡುವ ಈ ಪ್ರಶಂಸೆ ನಿಜಕ್ಕೂ ಅವರ ಕಾರ್ಯಸಾಧನೆ ಹೆಚ್ಚಿಸಿ ಅವರಲ್ಲಿ ನೈತಿಕಬಲ ಹೆಚ್ಚಿಸುವಂತದ್ದಾಗಿದ್ದು, ಎಸ್ಪಿ ರವಿ ಚನ್ನಣ್ಣನವರ್ ಅಂತಹ ಅಧಿಕಾರಿಗಳ ಕೆಲಸ ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ಪ್ರಶಂಸನೀಯವಾಗಿದೆ. ಅಷ್ಟೇ ಅಲ್ಲದೇ ಜೀವದ ಹಂಗು ತೊರೆದು ಕರ್ತವ್ಯ ಮಾಡುವ ಇಲಾಖೆಯ ಸಿಬ್ಬಂದಿ ಅಧಿಕಾರಿಗಳಿಗೆ ಅವರ ಮೇಲಾಧಿಕಾರಿಗಳು ಉತ್ತೇಜನ ನೀಡಬೇಕಿದೆ.

– ಯೋಗೀಶ್ ಕುಂಭಾಸಿ

Comments are closed.