ಕರ್ನಾಟಕ

ಒಂದೂವರೆ ವರ್ಷ ಕಳೆದರೂ ನಾಪತ್ತೆಯಾದ ಟೆಕ್ಕಿಯ ಸುಳಿವಿಲ್ಲ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ವಾಸವಾಗಿದ್ದ ಉಡುಪಿ ಮೂಲದ ಸಿವಿಲ್‌ ಎಂಜಿನಿಯರ್‌ ಆದರ್ಶ್‌ಕುಮಾರ್‌ ಶೆಟ್ಟಿ ಎಂಬುವರು ನಾಪತ್ತೆಯಾಗಿ ಒಂದೂವರೆ ವರ್ಷದ ಕಳೆದಿದ್ದು, ಈವರೆಗೂ ಅವರ ಪತ್ತೆಯಾಗಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದ ವಿವಿಧೆಡೆ ಪತ್ತೆಯಾದ ಅಪರಿಚಿತ ಶವಗಳ ಪರಿಶೀಲನೆ, ಆದರ್ಶ್‌ಕುಮಾರ್‌ ಮೊಬೈಲ್‌ ದೂರವಾಣಿ ಕರೆಗಳ ವಿವರ ಸಹ ಸಂಗ್ರಹಿಸಲಾಗಿತ್ತು.

ಇಷ್ಟಾದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದರಿಂದ ಕಂಗಾಲಾಗಿರುವ ಪೋಷಕರು ಹೈಕೋರ್ಟ್‌ ಮೊರೆಹೋಗಿದ್ದಾರೆ. ಕೋರ್ಟ್‌ ಸಹ ನಾಪತ್ತೆಯಾದವರ ಬಗ್ಗೆ ಸಣ್ಣ ಸುಳಿವೂ ದೊರೆಯದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಆದರ್ಶ್‌ ನಾಪತ್ತೆ ಪ್ರಕರಣದ ಹಿಂದಿನ ರಹಸ್ಯ ಏನು ಎಂಬುದನ್ನು ಪತ್ತೆಹಚ್ಚಲು ಮತ್ತಷ್ಟು ಆಳವಾಗಿ ತನಿಖೆ ನಡೆಸುವಂತೆ ಹುಳಿಮಾವು ಠಾಣೆ ಪೊಲೀಸರಿಗೆ ಸೂಚಿಸಿದೆ.

ಆದರ್ಶ್‌ಕುಮಾರ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಹೈಕೋರ್ಟ್‌ ಮೆಟ್ಟಿಲೇರುತ್ತಿದ್ದಂತೆ ಪ್ರಕರಣ
ಸಂಬಂಧ ಇದುವರೆಗೂ ನಡೆಸಿರುವ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿರುವ ಪೊಲೀಸರು, ಹಲವು
ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ.

ಆದರ್ಶ್‌ ನಾಪತ್ತೆಯಾದ ಮರುದಿನ ಉ.ಕನ್ನಡ ಜಿಲ್ಲೆ ಕುಮಟಾದಲ್ಲಿ ಆತನ ಮೊಬೈಲ್‌ ನಂಬರ್‌ ಲೊಕೇಶನ್‌ ಪತ್ತೆಯಾಗಿದೆ. ಬಳಿಕ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ. ಬಳಿಕ ಅವರ ಫೋನ್‌ ಸ್ವಿಚ್‌ ಆನ್‌ ಆಗಲಿಲ್ಲ. ಹೀಗಾಗಿ, ಕುಮಟಾ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಶೋಧ ನಡೆಸಲಾಯಿತು. ಆದರೂ, ಯಾವುದೇ ಸುಳಿವು ಸಿಕ್ಕಿಲ್ಲ.
ಆತನ ಸಹಪಾಠಿಗಳು ಸೇರಿ ಸೋದರ ಸಂಬಂಧಿ, ಕಾಲೇಜು ಸ್ನೇಹಿತರು, ಕಾಲೇಜಿನ ಕೆಲ ಸಿಬ್ಬಂದಿಯನ್ನೂ ವಿಚಾರಿಸಿ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪುತ್ರನನ್ನು ಹುಡುಕಿಸಿಕೊಡುವಂತೆ ಸೀತಾರಾಮ ಶೆಟ್ಟಿ ಸಲ್ಲಿಸಿರುವ ಹೆಬಿಯಸ್‌ ಕಾರ್ಪಸ್‌ ಅರ್ಜಿ ಆಲಿಸುತ್ತಿರುವ ನ್ಯಾ. ರಾಘವೇಂದ್ರ ಎಸ್‌.ಚವ್ಹಾಣ್‌ ನೇತೃತ್ವದ ವಿಭಾಗೀಯ ಪೀಠ, ನಿಗೂಢವಾಗಿ ನಾಪತ್ತೆಯಾದ ಹಿಂದಿರುವ ರಹಸ್ಯ ಬಯಲಾಗಲೇಬೇಕು. ಈ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಎಂದು ಪೊಲೀಸರಿಗೆ ತಾಕೀತು ಮಾಡಿದೆ.

ಅಲ್ಲದೆ, ತನಿಖಾ ತಂಡ ಸಲ್ಲಿಸಿರುವ ವರದಿಯನ್ನು ಪರಿಶೀಲಿಸುವ ಸಲುವಾಗಿ ಕನ್ನಡ ಭಾಷೆಯಲ್ಲಿರುವ ವರದಿಯನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿಕೊಡುವಂತೆ ಪೊಲೀಸರಿಗೆ ನಿರ್ದೇಶಿಸಿ ಜುಲೈ 23ಕ್ಕೆ ವಿಚಾರಣೆ ಮುಂದೂಡಿದೆ.

ಪ್ರಕರಣ ಏನು?: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಆದರ್ಶ್‌ಕುಮಾರ್‌, ದಸರಾ ಹಿನ್ನೆಲೆಯಲ್ಲಿ ಮೂರು ದಿನ ರಜೆ ಪಡೆದುಕೊಂಡಿದ್ದರು.ಅಲ್ಲದೆ ತಾನು ವಾಸವಿದ್ದ ಮಹಾಗಣಪತಿನಗರದ ಅಪಾರ್ಟ್‌ ಮೆಂಟ್‌ನ ಫ್ಲ್ಯಾಟ್‌ನಿಂದ 2016ರ ಅಕ್ಟೋಬರ್‌ 9ರಂದು ಹೊರಹೋದವನು ಪುನಃ ವಾಪಸ್‌ ಬಂದಿರಲಿಲ್ಲ. ಇದಾದ ಮೂರ್‍ನಾಲ್ಕು ದಿನಗಳ ಬಳಿಕ ವಿಷಯ ಗೊತ್ತಾಗಿ ಆದರ್ಶ್‌ಕುಮಾರ್‌ ನಾಪತ್ತೆ
ಸಂಬಂಧ ಅವರ ಸೋದರ ಸಂಬಂಧಿ ಸವಿನ್‌ ಶೆಟ್ಟಿ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Comments are closed.