ಕರ್ನಾಟಕ

ಕಾವೇರಿ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶ

Pinterest LinkedIn Tumblr

ಬೆಂಗಳೂರು: ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕಾವೇರಿನ ನಿರ್ವಹಣಾ ಮಂಡಳಿ ರಚನೆಗೆ ನಮ್ಮ ವಿರೋಧ ಇಲ್ಲ. ಆದರೆ ಅದರಲ್ಲಿನ ಕೆಲ ನಿಯಮಗಳಿಗೆ ನಮ್ಮ ಆಕ್ಷೇಪವಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದರು.

ಜಲ ವಿವಾದಗಳನ್ನು ನಿರ್ವಹಿಸಲು ನೀರಾವರಿ ತಜ್ಞರನ್ನು ನೇಮಕ ಮಾಡಿಕೊಂಡಿದ್ದೇನೆ. ಅವರು ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ಸಭೆ ಕರೆದಿದ್ದು, ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ನಾನು ಮತ್ತೆ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿಗೆ ಅವಕಾಶ ಕೋರಿದ್ದೇನೆ. 15 ದಿನ ಬಿಟ್ಟು ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಲೋಪ ಸರಿಪಡಿಸುವಂತೆ ಒತ್ತಾಯಿಸುತ್ತೇನೆ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಸಾಕಷ್ಟು ಅನ್ಯಾಯ ಆಗಿದೆ. ಆದರೂ, ನಾವು ಗೌರವ ಕೊಟ್ಟಿದ್ದೇವೆ. ಇದು ನಮ್ಮ ದೌರ್ಬಲ್ಯ ಅಲ್ಲ. ರಾಜ್ಯ ಯಾವತ್ತೂ ಕಾನೂನು ಉಲ್ಲಂಘನೆ ಮಾಡಿ‌ಲ್ಲ. ಜಲ ವಿವಾದದಿಂದಾಗಿ ಜನರು ಹಲವು ರೀತಿಯ ಸಮಸ್ಯೆ ಎದುರಿಸಿದ್ದಾರೆ’ ಎಂದರು.

ಅಂತರ್‌ರಾಜ್ಯ ಜಲವಿವಾದ ಕಾಯ್ದೆಯನ್ನು ತಿರುಚಲಾಗಿತ್ತು. ಅದರ ಅನುಷ್ಠಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಸರಿಪಡಿಸಬೇಕಿದೆ ಎಂದರು.

Comments are closed.