ಕರಾವಳಿ

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದರೆ ಎಚ್ಚರಿಕೆ : ಮಂಗಳೂರಿಗೆ ಬರಲಿದೆ ನಾಲ್ಕು ಟೈಗರ್ ಟೋವಿಂಗ್ ವಾಹನಗಳು

Pinterest LinkedIn Tumblr

ಮಂಗಳೂರು, ಜೂನ್.22: ಮಂಗಳೂರಿನ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಹೋಗುವವರಿಗೆ ಪೊಲೀಸ್ ಇಲಾಖೆ ಶಾಖ್ ನೀಡಿದೆ. ಪಾರ್ಕಿಂಗ್ ಅಲ್ಲದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ ಹೋದರೆ ವಾಹನವನ್ನು ಅಲ್ಲಿಂದ ಎತ್ತಂಗಡಿ ಮಾಡಲು ಶೀಘ್ರದಲ್ಲೇ ಮಂಗಳೂರಿಗೆ ಬರಲಿದೆ ನಾಲ್ಕು ಟೈಗರ್ ಟೋವಿಂಗ್ ವಾಹನಗಳು.

ಹೌದು, ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 80ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಮಂಗಳೂರು ಡಿಸಿಪಿ ಹನುಮಂತರಾಯ ಅವರು ಈ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರೊಂದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಡಿಸಿಪಿಯವರು, ನಗರದ ರಸ್ತೆಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ ಹೋಗುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲ ಕಲ್ಪಿಸಲು ಶೀಘ್ರದಲ್ಲೇ ಮಂಗಳೂರಿಗೆ ನಾಲ್ಕು ಟೈಗರ್ ಟೋವಿಂಗ್ ವಾಹನಗಳು ಬರಲಿವೆ ಎಂದು ಹೇಳಿದರು.

ಟೈಗರ್ ಟೋವಿಂಗ್ ವಾಹನಗಳು ಬಂದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಟೋವಿಂಗ್ ವಾಹನದ ಕುರಿತು ಈಗಾಗಲೇ ಎರಡು-ಮೂರು ಬಾರಿ ಟೆಂಡರ್ ಕರೆಯಲಾಗಿದ್ದರೂ ಅದಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಇದೀಗ ಹೊಸದಾಗಿ ಮಂಗಳೂರಿಗೆ ಟೈಗರ್ ಟೋವಿಂಗ್ ವಾಹನದ ವ್ಯವಸ್ಥೆ ಕಲ್ಪಿಸಲು ಆದೇಶವಾಗಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ ಕದ್ರಿ ವ್ಯಾಪ್ತಿಯ ರೆಸ್ಟೊರೆಂಟ್‌ವೊಂದರ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಶೈಲೇಶ್ ಎಂಬವರು ದೂರಿದರೆ, ಪಿವಿಎಸ್‌ ಸರ್ಕಲ್‌ನಿಂದ ಬಂಟ್ಸ್ ಹಾಸ್ಟೆಲ್‌ ವೃತ್ತದವರೆಗೆ ರಸ್ತೆಯಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಪಿವಿಎಸ್‌ ಬಳಿಯ ನಿವಾಸಿ ವಿನಾಯಕ ಎಂಬವರು ಮನವಿ ಮಾಡಿದರು.

ಈ ಎರಡು ಅಹವಾಲಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ರಸ್ತೆ ಬದಿ ಅನಧಿಕೃತವಾಗಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧ ಕೇಸು ದಾಖಲಿಸಲು ಸಂಚಾರ ಪೊಲೀಸರಿಗೆ ಸೂಚಿಸಿದರು.

ಬಸ್‌ನಲ್ಲಿ ಮಕ್ಕಳನ್ನು ಹತ್ತಿಸುವಾಗ-ಇಳಿಸುವಾಗಲೇ ಬಸ್ ನಿರ್ವಾಹಕ ಸೀಟಿ ಊದುತ್ತಾರೆ. ಪರಿಣಾಮ ಬಸ್ ಮುಂದೆ ಚಲಿಸುತ್ತದೆ. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಸುಭಾಷ್ ನಗರದ ಶೋಭಾ ನಾಯ್ಕ್ ಎಂಬವರು ದೂರಿದರು. ಇದಕ್ಕೆ ಉತ್ತರಿಸಿದ ಡಿಸಿಪಿ, ಆರ್‌ಟಿಒ ಅಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಕೊಟ್ಟಾರಚೌಕಿ, ಹೊನ್ನಕಟ್ಟೆ, ಕುಳಾಯಿ, ಕಂಕನಾಡಿ, ಕುಲಶೇಖರ, ಹಂಪನಕಟ್ಟೆ, ಕುಡುಪು, ಪಡೀಲು, ಮಂಗಳಾದೇವಿ ಪ್ರದೇಶಗಳಿಂದ ಬಸ್ ಬಾರದಿರುವುದು, ರಸ್ತೆ, ಸಂಚಾರ, ಸೋಲಾರ್‌ದೀಪ ಸಮಸ್ಯೆ ಸೇರಿದಂತೆ ಒಟ್ಟು 18 ದೂರುಗಳು ಸ್ವೀಕರಿಸಲ್ಪಟ್ಟವು.

ಸಂಚಾರ ಎಸಿಪಿ ಮಂಜುನಾಥ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಪಿ.ಯೋಗೇಶ್ವರ್, ಸುನೀಲ್‌ಕುಮಾರ್ ಎಚ್.ಟಿ., ತಿಮ್ಮರಾಜು, ಪುರುಷೋತ್ತಮ್ ಬಿ. ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.