ಕರಾವಳಿ

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ನೂರಾರು ಮಂದಿಯಿಂದ ಯೋಗ ಪ್ರದರ್ಶನ

Pinterest LinkedIn Tumblr

ಮಂಗಳೂರು, ಜೂನ್. 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಗುರುವಾರ ಮಂಗಳೂರಿನ ಮಂಗಳಾ ಸ್ಟೇಡಿಯಂ ನ ಒಳಾಂಗಣ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಟೆನ್ಷನ್ ರಹಿತ ಜೀವನಕ್ಕೆ ಯೋಗ ಪೂರಕ. ಋಷಿಮುನಿಗಳು ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಕೊಟ್ಟ ಕೊಡುಗೆ ಯೋಗ ಎಂದು ಸಚಿವ ಖಾದರ್ ಹೇಳಿದರು.

ಅಥಿತಿಗಳಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಚಂಚಲ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯಲು ಯೋಗ ಸಹಕಾರಿಯಾಗಬಲ್ಲುದು. ಅಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಯೋಗ ಪೂರಕವಾಗಿದೆ. ಮನುಷ್ಯನ ಜೀವನ ಪದ್ಧತಿಯಲ್ಲೇ ಯೋಗವಿದೆ. ಹಿಂದೂಗಳು ದೇವರಲ್ಲಿ ಪಾರ್ಥನೆ ಮಾಡುವಾಗ, ಇಸ್ಲಾಂ ಧರ್ಮೀಯರು ನಮಾಝ್ ಮಾಡುವಾಗ, ಕ್ರೈಸ್ತರು ಪ್ರಾರ್ಥನೆ ಸಲ್ಲಿಸುವಾಗಲೂ ಯೋಗದ ಅಂಶಗಳನ್ನು ಗಮನಿಸಬಹುದು. ಯೋಗ ರಷಿಮುನಿಗಳ ಕಾಲದಿಂದಲೂ ನಮ್ಮೊಡನೆ ಬೆರೆತುಕೊಂಡು ಬಂದಿದೆ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅಥಿತಿ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಯೋಗ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ದೈಹಿಕ ಸದೃಢತೆಯ ಜೊತೆಗೆ ಉತ್ತಮ ಆರೋಗ್ಯ ಯೋಗದಿಂದ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ ಜಿ.ಪಂ ಸಿಇಒ ಡಾ. ಎಂ ಆರ್ .ರವಿ, ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿ, ಹಿರಿಯ ಆಯುಷ್ ಅಧಿಕಾರಿ ಡಾ.ದೇವದಾಸ್ ಪುತ್ರನ್ ವಂದಿಸಿದರು. ಡಾ.ಶೋಭಾರಾಣಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯೋಗ‌ ಗುರು ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಈಗಾಗಲೇ ವಿವಿಧ ಸಂಸ್ಥೆಗಳು ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜುಗಳ ಸಹಯೋಗದೊಂದಿಗೆ ಜಿಲ್ಲೆಯ ವಿವಿದೆಡೆ 5000ಕ್ಕಿಂತಲೂ ಹೆಚ್ಚು ಸಾರ್ವಜನಿಕರಿಗೆ ಯೋಗ ತರಬೇತಿಯನ್ನು ನೀಡಲಾಗಿದೆ. ಸ್ವಚ್ಛ ಮನಸ್ಸು ಹಾಗೂ ಸ್ವಸ್ಥ ಶರೀರಕ್ಕಾಗಿ ವಿಶ್ವದಾದ್ಯಂತ ಭಾರತೀಯ ಜೀವನ ಪದ್ಧತಿಯಾದ ಯೋಗ ಜನಪ್ರಿಯವಾಗುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಯವರು ಈ ವೇಳೆ ತಿಳಿಸಿದರು.

Comments are closed.