ಕರಾವಳಿ

ಕೋಟೇಶ್ವರ ಸಹನಾ ಹೋಟೆಲ್ ಪ್ರಕರಣ: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಜಾಮೀನು

Pinterest LinkedIn Tumblr

ಕುಂದಾಪುರ: ಎಪ್ರಿಲ್ 9 ರಂದು ರಾತ್ರಿ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿರುವ ಲಾಡ್ಜ್ & ಹೋಟೆಲ್ ಆದ ಸಹನಾದಲ್ಲಿ ಗ್ರಾಹಕರಿಗೆ ಮದ್ಯ ನೀಡಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಚುನಾವಣಾಧಿಕಾರಿ ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಕಮೀಷನರ್ ಮತ್ತು ಪ್ರೊಬೆಶನರಿ ಐ‌ಎ‌ಎಸ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮಹೇಶ್ ಆಚಾರ್ಯಗೆ ಕುಂದಾಪುರದ 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

(ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ )

ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಮತ್ತು ಐ‌ಎ‌ಎಸ್ ಪ್ರೊಬೇಶನರಿ ಅಧಿಕಾರಿ ಪೂವಿತಾ ಹಾಗೂ ಅಬಕಾರಿ ಡಿಸಿ ಮೇರುನಂದನ್ ಅವರು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಹೋಟೆಲಿಗೆ ದಾಳಿ ನಡೆಸಿದಾಗ ಈ ಘಟನೆ ನಡೆದಿತ್ತು. ಹೋಟೇಲ್ ಪರವಾನಿಗೆ ಮೀರಿ ಮದ್ಯ ಸರಬರಾಜು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಖುದ್ದು ಉಪವಿಭಾಗಾಧಿಕಾರಿ ಭೂಬಾಲನ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಬಾರ್ ಮಾಲಿಕ ಸುರೇಂದ್ರ ಶೆಟ್ಟಿ, ಗ್ರಾಹಕ ಮಹೇಶ್ ಆಚಾರ್ಯ ಎಂಬಿಬ್ಬರನ್ನು ಬಂಧಿಸಿದ್ದರು. ಈ ಪೈಕಿ ಮಹೇಶ್ ಆಚಾರ್ಯ 65ಕ್ಕೂ ಅಧಿಕ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು ಜೈಲು ವಾಸ ಅನುಭವಿಸಿದ್ದು ಇಂದು ಅವರಿಗೆ ಜಾಮೀನು ಸಿಕ್ಕಿದೆ.

ಮಹೇಶ್ ಆಚಾರ್ಯ ವಕೀಲರು ನೀಡಿದ್ದ ಜಾಮೀನು ಅರ್ಜಿಯನ್ನು ಚುನಾವಣೆಯ ಕಾರಣ ನೀಡಿ ಅಭಿಯೋಜನೆ ಆಕ್ಷೇಪಿಸಿದ್ದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ 1ನೇ ಜೆ.ಎಂ.ಎಫ್.ಸಿ. ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕ್ರತಗೊಂಡಿದ್ದಲ್ಲದೇ ಬೆಂಗಳೂರು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ವಾಪಾಸ್ ಪಡೆಯಲಾಗಿತ್ತು. ಸದ್ಯ ಚುನಾವಣೆಯೂ ಮುಗಿದಿದ್ದು ಮಾತ್ರವಲ್ಲದೇ ಪೊಲೀಸರು ಪ್ರಕರಣದ ಚಾರ್ಜ್ ಶೀಟ್ ನ್ಯಾಯಲಯಕ್ಕೆ ಸಲ್ಲಿಸಿರುವ ಕಾರಣ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದ್ದು ಆರೋಪಿ ಪರ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

Comments are closed.