ಕರಾವಳಿ

ಭಾರೀ ಮಳೆಗೆ ಮಣ್ಣು ಕುಸಿತ, ರಸ್ತೆಗುರುಳಿ ಬಿದ್ದ ಮರಗಳು : ಇಂದು ಮತ್ತು ನಾಳೆ ಚಾರ್ಮಾಡ್ ಘಾಟ್ ಬಂದ್ – ಮಂಗಳೂರು-ಬೆಂಗಳೂರು ಪ್ರಯಾಣಿಕರು ಕಂಗಾಲು

Pinterest LinkedIn Tumblr

ಮಂಗಳೂರು, ಜೂನ್.13: ಮಂಗಳೂರು-ಬೆಂಗಳೂರು ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ಸಂಪೂರ್ಣ ಬಂದ್ ಆಗಿದೆ. ಎರಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆಗೆ ಭಾರೀ ಗಾತ್ರದ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು ಇನ್ನೂ ತೆರವುಗೊಳಿಸದ ಕಾರಣ  ರಸ್ತೆ ತಡೆಯುಂಟಾಗಿದ್ದು ವಾಹನ ಸವಾರರು, ಬಸ್ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಶಿರಾಡಿ ಘಾಟ್‌ನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಕೆಲತಿಂಗಳ ಹಿಂದೆಯೇ ಸಂಚಾರಕ್ಕೆ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಬೆಂಗಳೂರಿಗೆ ವಾಹನ ಸಂಚಾರ ಕಲ್ಪಿಸಲಾಗಿತ್ತು. ಮೊನ್ನೆ ರಾತ್ರಿ ಭಾರೀ ಗಾತ್ರದ ಮರ ರಸ್ತೆಗುರುಳಿದ್ದು ರಸ್ತೆತಡೆ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರೂ ಭಾರೀ ಮಳೆಯ ಹಿನ್ನೆಲೆಯಲ್ಲಿ ಅಸಾಧ್ಯವಾಗಿದೆ.

ಘಾಟ್‌ನ ಎರಡನೇ ತಿರುವಿನಲ್ಲಿ ಮರ ಬಿದ್ದಿದ್ದು ಸದ್ಯ ಘಾಟ್‌ನ ಎರಡೂ ಕಡೆ ಪ್ರಾರಂಭದಲ್ಲೇ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ. ಕಿ.ಮೀ.ಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಂತಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೂಡಿಗೆರೆ ಹಾಗೂ ಕೊಟ್ಟಿಗೆಹಾರದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಸಾಲುಗಟ್ಟಿ ನಿಂತ ವಾಹನಗಳನ್ನು ಬದಲಿ ರಸ್ತೆಯ ಮೂಲಕ ಮಂಗಳೂರಿನತ್ತ ಕಳುಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರೆಲ್ಲರನ್ನು ಕುದುರೆಮುಖ ಘಾಟ್ ಮೂಲಕ ಕಾರ್ಕಳಕ್ಕೆ ಸಾಗಿ ನಂತರ ಮಂಗಳೂರಿಗೆ ಸಾಗುವಂತೆ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಅತ್ತ ಮಂಗಳೂರಿನಿಂದ ಬರುತ್ತಿರುವ ವಾಹನಗಳನ್ನು ಉಜಿರೆಯ ಪೊಲೀಸರು ಅಲ್ಲಿಯೇ ತಡೆಹಿಡಿದು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಬೆಂಗಳೂರು-ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳಿಗೆ ಕೊಟ್ಟಿಗೆಹಾರದಲ್ಲಿ ಮಾರ್ಗಬದಲಾವಣೆ ಮಾಡಲಾಗಿದೆ.

ಶಿರಾಡಿ ಘಾಟ್ ಅನ್ನು ರಸ್ತೆ ಕಾಮಗಾರಿಗಾಗಿ ಬಂದ್ ಮಾಡಲಾಗಿದ್ದು, ಇಷ್ಟೊತ್ತಿಗಾಗಲೇ ರಸ್ತೆಯ ನಿರ್ಮಾಣ ಕಾರ್ಯ ಮುಗಿಯಬೇಕಿತ್ತು. ಮಂದಗತಿಯ ಕಾಮಗಾರಿ ಹಾಗೂ ನಿರಂತರವಾದ ಮಳೆಯಿಂದಾಗಿ ರಸ್ತೆ ನಿರ್ಮಣವು ಕುಂಟುತ್ತಾ ಸಾಗಿದೆ. ಬಹುಶಃ ಈ ತಿಂಗಳ ಕೊನೆಯಲ್ಲಿ ಇದರ ಕಾರ್ಯವು ಮುಕ್ತಾಯಗೊಂಡು ಸಂಚಾರಕ್ಕೆ ಬಿಡುವಾಗಬಹುದೆಂದು ನಿರೀಕ್ಷಿಸಲಾಗಿದೆ.

Comments are closed.