ಮಂಗಳೂರು, ಜೂನ್. 06: ನಗರದಲ್ಲಿ ಇತ್ತೀಚಿಗೆ ಸುರಿದಿದ್ದ ಭಾರೀ ಮಳೆಗೆ ಕೆಂಜಾರಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ತಡೆಗೊಡೆ ಬಳಿ ಭೂಕುಸಿತ ಕಂಡುಬಂದಿದ್ದು, ಸಮೀಪದ ಮನೆಯವರಲ್ಲಿ ಆತಂಕ ಮೂಡಿಸಿದೆ.
ಮೇ 29ರಂದು ಮಂಗಳೂರಿನಾದ್ಯಂತ ಸುರಿದಿದ್ದ ಭಾರೀ ಮಳೆ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯ ಒಂದು ಪಾರ್ಶ್ವದ ತಡೆಗೊಡೆ ಬಳಿ ಭೂ ಕುಸಿತ ಉಂಟಾಗಿದ್ದು, ಭೂ ಕುಸಿತದಿಂದ ರನ್ ವೇ ತಡೆಗೋಡೆ ಬಿರುಕು ಬಿಟ್ಟಿದೆ.
ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತದಿಂದ ವಿಮಾನ ನಿಲ್ದಾಣದ ರನ್ ವೇಗೆ ಯಾವೂದೇ ಅಪಾಯವಿಲ್ಲ. ಭೂ ಕುಸಿತ ಸಂಭವಿಸಿದ ಸ್ಥಳದಿಂದ ರನ್ ವೇ ಬಹಳ ಅಂತರದಲ್ಲಿದೆ ಎಂದು ಹೇಳಲಾಗಿದೆ.
ವದಂತಿಗೆ ಕಿವಿಕೊಡಬೇಡಿ :ವಾಸಂಸೆಟ್ಟಿ ವೆಂಕಟೇಶ್ವರ ರಾವ್
ಇದೇ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಬದಿಯ ರನ್ ವೇ ಗೋಡೆ ಕುಸಿದಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಾಸಂಸೆಟ್ಟಿ ವೆಂಕಟೇಶ್ವರ ರಾವ್ ಇದೆಲ್ಲ ಸುಳ್ಳು ವದಂತಿ ಎಂದು ಹೇಳಿದ್ದಾರೆ.
ಕಳೆದ ವಾರದ ಮಳೆಗೆ ವಿಮಾನ ನಿಲ್ದಾಣದ ಒಂದು ಕಡೆ ರನ್‌ವೇ ಗೋಡೆ ಕುಸಿದಿತ್ತು. ಇದನ್ನು ಸರಿಪಡಿಸಲಾಗಿದೆ. ಆದರೆ ಕೆಲವು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಲತಾಣಗಳಲ್ಲಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ತಪ್ಪು ಮಾಹಿತಿಗಳನ್ನು ರವಾನೆಯಾಗುತ್ತಿದೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ವಿಮಾನ ನಿಲ್ದಾಣವು ಎಂದಿನಂತೆಯೇ ಕಾರ್ಯಾಚರಿಸುತ್ತಿದೆ.
ಆದರೆ ಕೆಲವು ದೃಶ್ಯಮಾಧ್ಯಮಗಳಲ್ಲಿ ಗೋಡೆ ಕುಸಿತ ಎಂಬ ತಪ್ಪು ಮಾಹಿತಿ ರವಾನೆಯಾಗುತ್ತಿದೆ.,ಮಾಧ್ಯಮಗಳಲ್ಲಿ ಈ ಬಗ್ಗೆ ಸುಳ್ಳು ಮಾಹಿತಿಗಳನ್ನು ಬಿತ್ತರಿಸಲಾಗುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ. ಇಂತಹ ತಪ್ಪು ಸಂದೇಶಗಳನ್ನು ನಂಬ ಬೇಡಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Comments are closed.