ಕರಾವಳಿ

ಮಂಗಳೂರಿನಲ್ಲಿ ಮಳೆ ಆರ್ಭಟ : ಕೊಟ್ಟಾರ,ಪಂಪ್‌ವೆಲ್,ಕುದ್ರೋಳಿ,ಪಡೀಲ್ ಸೇರಿದಂತೆ ಎಲ್ಲೆಡೆ ಕೃತಕ ನೆರೆ ಸೃಷ್ಠಿ : ಅಂಗಡಿ ಹಾಗೂ ಮನೆಯೊಳಗೆ ನುಗ್ಗಿದ ನೀರು : ಲಕ್ಷಾಂತರ ರೂ. ನಷ್ಟ

Pinterest LinkedIn Tumblr

ಮಂಗಳೂರು, ಮೇ 29: ಕರಾವಳಿಯಾದ್ಯಂತ ಮಂಗಳವಾರ ಬೆಳಗ್ಗೆಯಿಂದಲೇ ಸುರಿದ ಭಾರೀ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮಂಗಳೂರಿನಲ್ಲಿ ಕೃತಕ ನೆರೆ ಉಂಟಾಗಿದೆ.

ನಗರದ ಹಲವು ಕಡೆ ಒಳಚರಂಡಿಯಲ್ಲಿ ಹೂಳು ತುಂಬಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ನಗರದ ಕೊಟ್ಟಾರ ಪರಿಸರವಂತೂ ನೀರು ತುಂಬಿ ಕೆರೆಯಂತಾಗಿದೆ. ಕೊಟ್ಟಾರಚೌಕಿಯ ಕರ್ನಿರೆ ಟವರ್ಸ್‌ನಲ್ಲಿರುವ ‘ನ್ಯಾಷನಲ್ ಸೂಪರ್ ಟ್ರೇಡರ್ಸ್‌’ ಎಂಬ ಹೆಸರಿನ ದಿನಸಿ ಅಂಗಡಿಗೆ ಮಳೆ ನೀರು ನುಗ್ಗಿ ಸುಮಾರು 28 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಳಗ್ಗಿನಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ನೀರು ರಸ್ತೆಯಲ್ಲೇ ಹರಿಯಿತಲ್ಲದೆ, ಸಮೀಪದ ದಿನಸಿ ಅಂಗಡಿಯೊಳಗೂ ನುಗ್ಗಿತು. ಇದರಿಂದ ಅಕ್ಕಿ, ಸಕ್ಕರೆ ಸಹಿತ ದಿನಸಿ ಸಾಮಗ್ರಿಗಳು ನೀರಿನಲ್ಲಿ ಮುಳುಗಿದೆ. ಅಷ್ಟೇ ಅಲ್ಲ ಅಂಗಡಿಯ ಪಾಲುದಾರರು, ಕಾರ್ಮಿಕರ ಸಹಿತ ಸುಮಾರು 10ಕ್ಕೂ ಅಧಿಕ ಮಂದಿ ಅಂಗಡಿಯಿಂದ ಹೊರಗೆ ಬರಲಾಗದ ಸ್ಥಿತಿ ಎದುರಿಸುತ್ತಿದ್ದಾರೆ. ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಕೂಡಾ ಭಾಗಶಃ ಮುಳುಗಡೆಯಾಗಿವೆ.

‘ಕಳೆದ 5 ವರ್ಷಗಳಿಂದ ನಾವು ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದೇವೆ. ಮಳೆಯಿಂದ ಆಗಾಗ ಅಂಗಡಿಗೆ ನೀರು ನುಗ್ಗುವ ಸಮಸ್ಯೆಯಿದ್ದರೂ ಇಂತಹ ಅನಾಹುತ ಸಂಭವಿಸಿರುವುದು ಇದೇ ಮೊದಲು. ಅಂಗಡಿಯೊಳಗಿರುವ ನಾವು ಹೊರಗೆ ಬರಲಾಗದೆ ನೀರು ಇಳಿಮುಖವಾಗುವುದನ್ನು ಕಾಯುತ್ತಿದ್ದೇವೆ’ ಎಂದು ಅಂಗಡಿಯ ಪಾಲುದಾರರೊಬ್ಬರು ತಿಳಿಸಿದ್ದಾರೆ.

ನಗರದ ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಚೇರಿ ಎದುರಿನ ರಸ್ತೆ, ಕಾಪಿಕಾಡ್, ನಂತೂರು, ಅತ್ತಾವರ, ಬಲ್ಮಠ, ಪಡೀಲ್‌ನ ರೈಲ್ವೆ ಮೇಲ್ಸೆತುವೆಯಡಿ ಇತ್ಯಾದಿ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಕೆ.ಎಸ್.ರಾವ್ ರಸ್ತೆಯಲ್ಲೂ ಚರಂಡಿ ನೀರು ರಸ್ತೆ ಹರಿಯುತ್ತಿದ್ದು ವಾಹನ ಸವಾರರ ಸಂಕಷ್ಟ ಎದುರಿಸುತ್ತಿದ್ದಾರೆ.

ಉರ್ವ ಹೊಯ್ಗೆ ಬಝಾರ್‌ನಲ್ಲಿ ಕೆಲವು ಮನೆಗಳ ಆವರಣಕ್ಕೆ ಚರಂಡಿ ನೀರು ನುಗ್ಗಿದ್ದು, ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಕುಳಾಯಿಯಲ್ಲಿ ನಾಲ್ಕು ಮನೆಗಳಿಗೆ, ಒಂದು ಅಂಗಡಿಗೆ ನೀರು ನುಗ್ಗಿದೆ. ಇದಕ್ಕೆ ಚರಂಡಿ ಹೂಳೆತ್ತದಿರುವುದೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಡೊಂಗರಕೇರಿಯ ಕೆಲವು ಮನೆಗಳಿಗೆ ಕೃತಕ ನೆರೆಯಿಂದ ನೀರು ನುಗ್ಗಿದೆ.

ಜ್ಯೋತಿ ಸರ್ಕಲ್ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪ್ರಯಾಣಿಕರು ಬಸ್ಸುಗಳನ್ನೇರಲು ತೀವ್ರ ಸಂಕಷ್ಟ ಎದುರಿಸಿದರು. ಪಡೀಲ್ ರೈಲ್ವೆ ಸೇತುವೆಯಡಿ ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಹಲವು ವಾಹನಗಳು ನೆರೆ ನೀರಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾದವು.

ಮಂಗಳೂರಿನ ರಥಬೀದಿಯಿಂದ ಮಹಾಮ್ಮಾಯಿ ದೇವಸ್ಥಾನ ಮುಂಭಾಗದಿಂದ ಡೊಂಗರಕೇರಿಗೆ ಸಾಗುವ ರಸ್ತೆ, ಕುದ್ರೋಳಿಯಿಂದ ಪ್ರಗತಿ ಸರ್ವಿಸ್ ಸ್ಟೇಷನಗೆ ಹೋಗುವ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಸಂಕಷ್ಟಕ್ಕೊಳಗಾದರು. ಪ್ರಗತಿ ಸರ್ವೀಸ್ ಸ್ಟೇಷನ್ ಎದುರಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಸರ್ವೀಸ್ ಸ್ಟೇಷನ್‌ಗೂ ನೀರು ನುಗ್ಗಿದೆ.

ನಗರದ ಅತ್ತಾವರ ಕಾಪ್ರಿಗುಡ್ಡ, ಕೆಎಂಸಿ ಆಸ್ಪತ್ರೆ ರಸ್ತೆಯೂ ಭಾಗಶಃ ನೀರಲ್ಲಿ ಮುಳುಗಿದೆ. ಆಸುಪಾಸಿನ ಅನೇಕ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಚಾಲಕರು ಆಟೊ ರಿಕ್ಷಾವನ್ನು ಮುಖ್ಯರಸ್ತೆಯ ಬದಲು ಒಳರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ನಗರ ಹೊರವಲಯದ ಅಡ್ಯಾರ್ ಕಣ್ಣೂರು ಸಮೀಪದ ಬೋರುಗುಡ್ಡೆಯಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ಸಮೀಪದಲ್ಲೇ ನಿಲ್ಲಿಸಲಾಗಿದ್ದ ಓಮ್ನಿ ಕಾರೊಂದರ ಮೇಲೆ ಬಿದ್ದಿದ್ದು, ಕಾರು ಭಾಗಶಃ ಜಖಂಗೊಂಡಿದೆ.ಆದರೆ ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಬೈಂಕಪಾಡಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಕಾರ್ಖಾನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ಕೂಳೂರಿನಲ್ಲಿ ರಸ್ತೆಯಲ್ಲೇ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

ರಾ.ಹೆ. 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಗಾಗಿ ಅಲ್ಲಲ್ಲಿ ಹೊಂಡ ತೋಡಿರುವುದರಿಂದ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಪಂಪ್‌ವೆಲ್‌ನಿಂದ ಬಸ್‌ಗಳು ಕಂಕನಾಡಿ, ಸ್ಟೇಟ್ ಬ್ಯಾಂಕ್ ಕಡೆ ಚಲಿಸಲಾಗದ ಕಾರಣ ಪ್ರಯಾಣಿಕರು ಸಮಸ್ಯೆಗೊಳಗಾದರು.

ಇಂದು ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆದರೂ ಜಡಿ ಮಳೆಯಿಂದ ಆತಂಕಿತರಾದ ಶಿಕ್ಷಕ ವರ್ಗವು ಮಧ್ಯಾಹ್ನದ ಬಳಿಕ ಬಹುತೇಕ ಶಾಲೆಗಳ ಮಕ್ಕಳಿಗೆ ರಜೆ ನೀಡಿದೆ. ಇದರಿಂದ ಮಕ್ಕಳು ಮಾತ್ರವಲ್ಲದೆ, ಅವರನ್ನು ಕರೆದೊಯ್ಯುವ ವಾಹನ ಚಾಲಕರು ಕೂಡ ತೊಂದರೆಗೀಡಾದರು ಮುಂಗಾರು ಮಳೆಯು ಕೇರಳ ಪ್ರವೇಶಿಸಿದೆ. ಈ ನಡುವೆ ಕರ್ನಾಟಕ ಕರಾವಳಿಯಲ್ಲೂ ವ್ಯಾಪಕ ಮಳೆ ಸುರಿಯಲಾರಂಭಿಸಿದ್ದು, ಹಲವೆಡೆ ಗಾಳಿಮಳೆಯಿಂದ ಹಾನಿ ಸಂಭವಿಸಿದೆ.
==

Comments are closed.