
ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ’ಕಾಲಾ’ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಕೇವಲ 24 ಗಂಟೆಗಳ ಒಳಗೆ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿ ಯೂಟ್ಯೂಬಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿತ್ತು. ಇದುವರೆಗೆ ’ಕಾಲಾ’ ತಮಿಳು ಟ್ರೇಲರ್‌ಗೆ 134k ಲೈಕ್ಸ್ 18k ಡಿಸ್‍ಲೈಕ್ಸ್ ಸಿಕ್ಕಿವೆ. ಮುಂದಿನ ದಿನಗಳಲ್ಲಿ ಟ್ರೇಲರ್ ವೀಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಕಬಾಲಿ ಚಿತ್ರವನ್ನು ನಿರ್ದೇಶಿಸಿದ್ದ ಪಾ ರಂಜಿತ್ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮುಂಬೈನ ಧಾರಾವಿ ಕೊಳಗೇರಿಯಲ್ಲಿ ವಾಸವಾಗಿರುವ ತಮಿಳರ ಕಥೆಯ ಹಿನ್ನೆಯಲ್ಲಿ ಸಾಗುವ ಕಥೆಯಲ್ಲಿ ಕರಿಕಾಲನ್ ಆಗಿ ರಜನಿಕಾಂತ್ ಕಾಣಿಸಲಿದ್ದಾರೆ. ತಮಿಳರು ವಾಸವಾಗಿರುವ ಭೂಮಿಯನ್ನು ಕಬಳಿಸಲು ರಾಜಕೀಯ ಪುಡಾರಿಗಳು ಮಾಡುವ ಕುತಂತ್ರವನ್ನು ಎದುರಿಸುವ ಒಂಟಿ ತಲೆ ರಾವಣನಾಗಿ ರಜನಿಕಾಂತ್ ವಿಶ್ವರೂಪ ತೋರಲಿದ್ದಾರೆ.
ಆ ವಿಶ್ವರೂಪ ಹೇಗಿರುತ್ತದೆ ಎಂಬುದನ್ನು ಈ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ರಜನಿಕಾಂತ್ ಅಳಿಯ ಧನುಷ್ ಈ ಚಿತ್ರಕ್ಕೆ ನಿರ್ಮಾಪಕ. ಈಗಾಗಲೆ ಸೆನ್ಸಾರ್ ಪೂರೈಸಿಕೊಂಡಿರುವ ಈ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಜೂನ್ 7ರಂದು ಸಿನಿಮಾ ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಖಳನಟನ ಪಾತ್ರದಲ್ಲಿ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್ ಕಾಣಿಸಲಿದ್ದಾರೆ. ಪಾತ್ರವರ್ಗದಲ್ಲಿ ಹುಮಾ ಖುರೇಷಿ, ಈಶ್ವರಿ ರಾವ್, ಸಮುದ್ರಕಣಿ, ಅಂಜಲಿ ಪಾಟೀಲ್ ಇದ್ದಾರೆ.
’ಕಾಲಾ’ ಬಿಡುಗಡೆಗೆ ರಾಜ್ಯದಲ್ಲಿ ವಿರೋಧ
ಈ ಹಿಂದೆ ಕರ್ನಾಟಕದ ವಿರುದ್ಧ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು ’ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್. ಕನ್ನಡಿಗರ ಕ್ಷಮೆಯಾಚಿಸುವವರೆಗೆ ’ಬಾಹುಬಲಿ’ ಚಿತ್ರ ಬಿಡುಗಡೆಗೆ ಅವಕಾಶ ನೀಡಿರಲಿಲ್ಲ. ಇದೀಗ ಕಾವೇರಿ ವಿಚಾರದಲ್ಲಿ ರಜನಿಕಾಂತ್ ತಮಿಳರ ಪರ ವಕಾಲತ್ತು ವಹಿಸಿರುವ ಕಾರಣ ಅದರ ನೇರ ಪರಿಣಾಮ ’ಕಾಲಾ’ ಚಿತ್ರದ ಮೇಲೆ ಬಿದ್ದಿದೆ.
ಕಾಲಾ ಚಿತ್ರವನ್ನು ಜೂನ್ 7ರಂದು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಲ್ಲ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಅಧ್ಯಕ್ಷ ಸಾ ರಾ ಗೋವಿಂದು. ಚಿತ್ರಮಂದಿರದ ಮಾಲೀಕರು, ವಿತರಕರಿಗೆ ಈಗಾಗಲೆ ’ಕಾಲಾ’ ಚಿತ್ರದ ಹಕ್ಕುಗಳನ್ನು ಖರೀದಿಸದಂತೆ ಸೂಚಿಸಿದ್ದೇವೆ. ಕೆಎಫ್‍ಸಿಸಿ ಅಧ್ಯಕ್ಷರಾಗಿ ತಾವು ಈ ಫರ್ಮಾನು ಹೊರಡಿಸಿಲ್ಲ. ರಾಜ್ಯದ ಹೆಮ್ಮೆಯ ಕನ್ನಡಿಗನಾಗಿ, ಕನ್ನಡಪರ ಚಳುವಳಿಗಾರನಾಗಿ ಅವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ ಸಾ ರಾ ಗೋವಿಂದು.
ಕಾಲಾ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಹಲವಾರು ಕನ್ನಡಪರ ಸಂಘಟನೆಗಳು ವಾಣಿಜ್ಯ ಮಂಡಳಿಗೆ ಪತ್ರ ಬರೆದಿವೆ. ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಕಾಲಾ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುತ್ತಿಲ್ಲ. ಈ ಬಗ್ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಜತೆಗೂ ಚರ್ಚಿಸಿದ್ದೇವೆ ಎಂದಿದ್ದಾರೆ ಗೋವಿಂದು.
Comments are closed.