ಕರಾವಳಿ

ಭಾರೀ ಮಳೆಗೆ ಮಂಗಳೂರು ತತ್ತರ : ತಗ್ಗುಪ್ರದೇಶ ಜಲಾವೃತ : ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ: ಜನಜೀವನ ಅಸ್ತವ್ಯಸ್ಥ

Pinterest LinkedIn Tumblr

ಮಂಗಳೂರು ಮೇ 29  : ವಾಯುಭಾರ ಕುಸಿತದಿಂದ ನಿನ್ನೆ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದ್ದು ಜನಜೀವನ ತತ್ತರಿಸಿದೆ. ತಗ್ಗುಪ್ರದೇಶಗಳಿಗೆ ನುಗ್ಗಿದ ನೀರಿನಿಂದ ಜನ ಕಂಗಾಲಾಗಿದ್ದಾರೆ. ಮನೆಗಳಿಗೆ ನುಗ್ಗಿದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಇಂದು ಮುಂಜಾನೆಯಿಂದ ಧಾರಕರವಾಗಿ ಸುರಿದ ಮಳೆಗೆ ಮಂಗಳೂರಲ್ಲಿ ವಸ್ತುಶಃ ಜಲಪ್ರಳಯದ ಪರಿಸ್ತಿತಿ ಉಂಟಾಗಿದೆ. ಕುಂಭದ್ರೋಣ ಮಳೆಗೆ ಕರಾವಳಿ ತತ್ತರಿಸಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿವೆ. ಹಗರದ ಹಲವೆಡೆಗಳಲ್ಲಿ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಅನಾಹುತ ಸೃಷ್ಟಿಯಾಗಿದೆ.

ಮಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳಲ್ಲೂ ಪ್ರವಾಹ ತುಂಬಿ ಹರಿಯುತ್ತಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಮಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿವೆ.

ಜಿಲ್ಲೆಯಲ್ಲಿ ಮುಂಗಾರಿನ ಮಾರುತ ಭರ್ಜರಿ ಪ್ರವೇಶ ಪಡೆದುಕೊಂಡಿದೆ. ಸತತ ನಿರಂತರ ವರ್ಷಧಾರೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕರಾವಳಿ ನಗರಿಯಲ್ಲಿ ಜಲಪ್ರಳಯವೇ ಸಂಭವಿಸಿದೆ. ಮೇಘ ಸ್ಫೋಟ ಸದೃಶ್ಯವಾಗಿ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟಕ್ಕೆ ಜನತೆ ಕಂಗಾಗಲಾಗಿದ್ದಾರೆ.

ಮಂಗಳೂರು ನಗರ, ಸುರತ್ಕಲ್, ಮೂಲ್ಕಿ, ಮೂಡಬಿದ್ರೆ, ಪುತ್ತೂರು, ಬಂಟ್ವಾಳ, ಸುಬ್ರಹ್ಮಣ್ಯದಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಮಂಗಳೂರಿನ ಕುಳಾಯಿ, ಕೂಳೂರು, ಕೊಟ್ಟಾರ ಚೌಕಿ ಪ್ರದೇಶದಲ್ಲಿ ರಸ್ತೆ ಹೊಳೆಯಂತಾಗಿದ್ದು ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ.

ಮಂಗಳೂರಿನ ಪಡೀಲ್, ಜ್ಯೋತಿ ಸರ್ಕಲ್, ಎಂ.ಜಿ. ರೋಡ್, ಬೈಕಂಪಾಡಿ ಮತ್ತು ಬಿ.ಸಿ.ರೋಡ್ ಪ್ರದೇಶಗಳು ಮುಳುಗಡೆಯಾಗಿವೆ. ಸುರತ್ಕಲ್ ನಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿವೆ. ಒಟ್ಟಿನಲ್ಲಿ ಮುಂಗಾರು ಪ್ರವೇಶದೊಂದಿಗೆ ಸುರಿದ ಮೊದಲ ಮಳೆಗೆ ಕರಾವಳಿಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

Comments are closed.