ಪ್ರಮುಖ ವರದಿಗಳು

2017-18 ರಲ್ಲಿ ಬ್ಯಾಂಕಿಂಗ್ ವಂಚನೆಯಿಂದ 21 ಬ್ಯಾಂಕ್ ಗಳು ಕಳೆದುಕೊಂಡ ಮೊತ್ತ ಬರೊಬ್ಬರಿ 25,775 ಕೋಟಿ !

Pinterest LinkedIn Tumblr

ಇಂದೋರ್: ಸಾರ್ವಜನಿಕ ವಲಯದ 21 ಬ್ಯಾಂಕ್ ಗಳು 2017-18 ರಲ್ಲಿ ಬರೊಬ್ಬರಿ 25,775 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂಬ ಮಾಹಿತಿಯನ್ನು ಆರ್ ಟಿಐ ಒಂದು ಬಹಿರಂಗಪಡಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ಅಂದರೆ 6461.13 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎಂದು ಚಂದ್ರಶೇಖರ್ ಗೌಡ್ ಎಂಬುವವರು ಸಲ್ಲಿಸಿದ್ದ ಆರ್ ಟಿಐಗೆ ಬಂದಿರುವ ಉತ್ತರದಿಂದ ತಿಳಿದುಬಂದಿದೆ. 12,636 ಕೋಟಿ ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಮುಂಬೈ ಕೋರ್ಟ್ ನಲ್ಲಿ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಗಳನ್ನು ದಾಖಲಿಸಿದೆ.

ಆರ್ ಟಿಐ ಮಾಹಿತಿಯ ಪ್ರಕಾರ ಎಸ್ ಬಿಐ 2017-18 ರಲ್ಲಿ ಒಟ್ಟು 2,224.86 ಕೋಟಿ ರೂಪಾಯಿಗಳನ್ನು ಬ್ಯಾಂಕಿಂಗ್ ಫ್ರಾಡ್ ನಿಂದ ಕಳೆದುಕೊಂಡಿದ್ದರೆ ಬ್ಯಾಂಕ್ ಆಫ್ ಬರೋಡಾ 1,928.25 ಕೋಟಿ ರೂಪಾಯಿ, ಅಲ್ಲಹಾಬಾದ್ ಬ್ಯಾಂಕ್ 1,520.37 ಕೋಟಿ ರೂಪಾಯಿ, ಆಂಧ್ರ ಬ್ಯಾಂಕ್ 1,303.30 ಕೋಟಿ ರೂಪಾಯಿ, ಯುಕೋ ಬ್ಯಾಂಕ್ 1,224.64, ಐಡಿಬಿಐ ಬ್ಯಾಂಕ್ 1,116.53 ಯೂನಿಯನ್ ಬ್ಯಾಂಕ್ 1,095.84 ಕೋಟಿ ರೂಪಾಯಿ, ಸೆಂಟ್ರಲ್ ಬ್ಯಾಂಲ್ ಆಫ್ ಇಂಡಿಯಾ 1,084.50 ರೂಪಾಯಿ, ಬ್ಯಾಂಕ್ ಆಫ್ ಮಹಾರಾಷ್ಟ್ರ 1,029.23 ರೂಪಾಯಿ ಓವರ್ಸೀಸ್ ಬ್ಯಾಂಕ್ 1,015.79 ರೂಪಾಯಿ ನಷ್ಟ ಎದುರಿಸಿವೆ ಎಂದು ಆರ್ ಟಿಐ ಗೆ ನೀಡಿರುವ ಉತ್ತರದಲ್ಲಿ ಆರ್ ಬಿಐ ತಿಳಿಸಿದೆ.

ಆರ್ ಟಿಐ ಗೆ ನೀಡಲಾಗಿರುವ ಉತ್ತರದಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವರೆಗಿನ ವಂಚನೆ ನಡೆದಿರುವ ಪ್ರಕರಣಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

Comments are closed.