ಕರಾವಳಿ

ಅಡ್ಯಾರ್ ಗಾರ್ಡನ್‍ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2018ಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ 3ನೇ ವರ್ಷದ ಪಟ್ಲ ಸಂಭ್ರಮ-2018 ಕಾರ್ಯಕ್ರಮವು ಬಾನುವಾರ ಬೆಳಿಗ್ಗೆ ಅಡ್ಯಾರ್ ಗಾರ್ಡನ್ ನಲ್ಲಿ ಚಾಲನೆ ನೀಡಲಾಯಿತು.

ಪಟ್ಲ ಫೌಂಡೇಶನ್‌ನ ಪುಣ್ಯ ಕಾರ್ಯಕ್ಕೆ ದುರ್ಗಾಮಾತೆಯ ಶ್ರೀರಕ್ಷೆ ನಿರಂತರವಾಗಿರಲಿ : 

ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ವೆಂಕಟರಮಣ ಆಸ್ರಣ್ಣರು ಯಕ್ಷಧ್ರುವ ಪಟ್ಲ ಸಂಭ್ರಮ- 2018ರ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಕ್ಷಗಾನ ಕಲಾವಿದರ ಜೀವನದ ಏಳಿಗೆಯ ದೃಷ್ಟಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ವೃತ್ತಿ ಕಲಾವಿದರ ಜತೆಗೆ ನಿವೃತ್ತ ಕಲಾವಿದರ ಹಿತದೃಷ್ಟಿಯಿಂದಲೂ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಪುಣ್ಯ ಕಾರ್ಯಕ್ಕೆ ದುರ್ಗಾಮಾತೆಯ ಶ್ರೀರಕ್ಷೆ ನಿರಂತರವಾಗಿರಲಿ ಎಂದು ಅವರು ಶುಭಹಾರೈಸಿದರು.

ಪಟ್ಲ ಸತೀಶ್‌ ಶೆಟ್ಟಿಯವರಿಂದ ಮಧುಕರ ವೃತ್ತಿ ; ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಶ್ಲಾಘನೆ

ಮತ್ತೋರ್ವ ಆನುವಂಶೀಯ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಯಕ್ಷಗಾನದ ಕಲೆಯ ವೃದ್ಧಿಗೆ ಕಟೀಲು ದೇವಿಯು ಮೊದಲ ಟ್ರಸ್ಟ್‌ ಆಗಿದ್ದು, ಪಟ್ಲ ಫೌಂಡೇಶನ್‌ 2ನೇ ಟ್ರಸ್ಟ್‌ ಎನಿಸಿಕೊಂಡಿದೆ. ಭಾಗವತ ಪಟ್ಲ ಸತೀಶ್‌ ಶೆಟ್ಟಿ ಇದ್ದವರಿಂದ ಪಡೆದು ಇಲ್ಲದರಿಗೆ ಹಂಚುವ ಮೂಲಕ ಮಧುಕರ ವೃತ್ತಿಯನ್ನು ಮಾಡುತ್ತಿದ್ದಾರೆ ಎಂದರು.

 

ಸರಕಾರ ಕಲಾವಿದರಿಗೆ ನೆರವಾಗುವ ಕಾರ್ಯ ಮಾಡಬೇಕು : ಪ್ರೊ| ಎಂ.ಎ. ಹೆಗಡೆ

ರಾಜ್ಯ ಯಕ್ಷಗಾನ ಅಕಾಡೆಮಿಯು ಒಂದು ವರ್ಷದಲ್ಲಿ ವೆಚ್ಚ ಮಾಡುವ ಮೊತ್ತವನ್ನು ಪಟ್ಲ ಫೌಂಡೇಶನ್‌ ಒಂದು ದಿನದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿ ವ್ಯಯಿಸುತ್ತಿರುವುದು ಇಡೀ ನಾಡೇ ಹೆಮ್ಮೆ ಪಡಬೇಕಾದ ವಿಚಾರ. ಸರಕಾರ ಇದೇ ರೀತಿ ಚಿಂತಿಸಿ ಕಲಾವಿದರಿಗೆ ನೆರವಾಗುವ ಕಾರ್ಯವನ್ನು ಮಾಡಬೇಕಿದೆ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಟ್ರಸ್ಟ್‌ ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಟ್ರಸ್ಟ್‌ನ ವೆಬ್‌ಸೈಟ್‌ಗೆ ಚಾಲನೆ : ಪಟ್ಲಯಾನ’ ಪುಸ್ತಕ ಬಿಡುಗಡೆ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಟ್ರಸ್ಟ್‌ ನ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ರಾಕೇಶ್‌ ಪೂಂಜಾ ಸಂಪಾದಕತ್ವದ ‘ಪಟ್ಲಯಾನ’ ಪುಸ್ತಕ ಬಿಡುಗಡೆಗೊಂಡಿತು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಉದ್ಯಮಿ ಸೌಂದರ್ಯ ರಮೇಶ್‌ ಡಾ| ನಾರಾಯಣ ಶೆಟ್ಟಿ ಹಾಗೂ ಗಣೇಶ್‌ ಕೊಲೆಕಾಡಿ ಅವರ ಯಕ್ಷಗಾನ ಪ್ರಸಂಗಗಳ ಸಂಪುಟವನ್ನು ಬಿಡುಗಡೆಗೊಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಟ್ರಸ್ಟ್‌ ನ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಉದ್ಯಮಿ ಎನ್‌.ಟಿ. ಪೂಜಾರಿಯವರಿಂದ ಆರೋಗ್ಯ ಶಿಬಿರ ಉದ್ಘಾಟನೆ :

ಮುಂಬಯಿನ ಹೊಟೇಲ್‌ ಉದ್ಯಮಿ ಎನ್‌.ಟಿ. ಪೂಜಾರಿ ಉದ್ಘಾಟಿಸಿದರು. ಸಾಮಾಜಿಕ ಮುಂದಾಳು ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಎ.ಜೆ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಜಯಶಂಕರ ಮಾರ್ಲ ಅವರು ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ ಸರಪಾಡಿ ಅವರಿಗೆ ಔಷಧ ಕಿಟ್‌ ಹಸ್ತಾಂತರಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.

ಗಣ್ಯರ ದಿವ್ಯ ಉಪಸ್ಥಿತಿ ;

ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆನುವಂಶೀಯ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ ಕಡೆತ್ತೂರುಗುತ್ತು, ಆರ್‌ಎಸ್‌ಎಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ಮಾಜಿ ಶಾಸಕ ಜೆ.ಆರ್‌.ಲೋಬೋ, ಶ್ರೀದೇವಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ, ಆದಾಯ ತೆರಿಗೆ ಇಲಾಖೆಯ ಉಪಾಯುಕ್ತ ಎಂ. ನಾಗಭೂಷಣ, ಟ್ರಸ್ಟ್‌ ಗೌರವಾಧ್ಯಕ್ಷ ಮಹಾಬಲ ಶೆಟ್ಟಿ ಪಟ್ಲ, ನಿಟ್ಟೆ ವಿವಿ ಕುಲಪತಿ ಡಾ| ಸತೀಶ್‌ ಭಂಡಾರಿ, ಡಾ| ಪ್ರಭಾಕರ ಜೋಶಿ ಉಪಸ್ಥಿತರಿದ್ದರು.

ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಸ್ವಾಗತಿಸಿದರು. ರವಿ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಹಾಗೂ ಪ್ರ. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌ ನಿರ್ವಹಿಸಿದರು.

ಮಹಿಳಾ ಯಕ್ಷಗಾನ ಪ್ರದರ್ಶನ :

ಅಡ್ಯಾರ್ ಗಾರ್ಡನ್ ನಲ್ಲಿ ಬೆಳಗ್ಗೆ 8 ರಿಂದ ರಾತ್ರಿ 12 ಗಂಟೆಯವರೆಗೆ ನಡೆದ ಸಂಭ್ರಮದಲ್ಲಿ ಮೊದಲಿಗೆ ಬೆಳಗ್ಗೆ 8ರಿಂದ ಚೆಂಡೆ ಜುಗಲ್ ಬಂದಿ, ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ ಸೇರಿದಂತೆ ಉದ್ಘಾಟನಾ ಸಮಾರಂಭ ನಡೆಯಿತು.

ಬಳಿಕ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರು, ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಔಷಧಿ ವಿತರಣೆ, ಯಕ್ಷಸಪ್ತಸ್ವರ ಗಾನವೈಭವ, ಮಧ್ಯಾಹ್ನ ಮಹಿಳಾ ಯಕ್ಷಗಾನ ಪ್ರದರ್ಶನ, ಯಕ್ಷಗಾನ ಕಾರ್ಯಕ್ರಮ ನಡೆಯಿತು.

Comments are closed.