ಕರಾವಳಿ

ಕರ್ನಾಟಕ ಬಂದ್: ಕುಂದಾಪುರದಲ್ಲಿ ಬಂದ್ ಇಲ್ಲ: ಬೈಂದೂರಿನಲ್ಲಿ ನೀರಸ ಪ್ರತಿಕ್ರಿಯೆ

Pinterest LinkedIn Tumblr

ಕುಂದಾಪುರ: ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿಯು ರಾಜ್ಯ ಬಂದ್ ಕರೆ ನೀಡಿದ್ದು ಕುಂದಾಪುರದಲ್ಲಿ ಬಂದ್ ಇರಲಿಲ್ಲ. ಬೈಂದೂರು ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದ್ದು ರೈತ ಸಂಘ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಅವರಿಗೆ ಮನವಿ ನೀಡಿದರು. ಇನ್ನು ವಂಡ್ಸೆ, ಚಿತ್ತೂರು ಭಾಗದಲ್ಲಿ ಸ್ವಯಂಪ್ರೇರಿತರಾಗಿ ಕೆಲ ಕಾಲ ಅಂಗಡಿ ಮಾಲಿಕರು ಅಂಗಡಿ ಮುಂಗಟ್ಟು ಮುಚ್ಚಿದ್ದರು.

ಶಾಲೆ, ಬಸ್, ಆಟೋ ಸುಗಮ..
ಸೋಮವಾರ ಬಂದ್ ಕರೆ ನೀಡಿದ್ದರೂ ಕೂಡ ಯಾವುದೇ ಖಾಸಗಿ ಬಸ್ ಮಾಲಕ-ಚಾಲಕರ ಸಂಘಟನೆ, ಆಟೋ ರಿಕ್ಷಾದವರ ಸಂಘಟನೆ ಬೆಂಬಲ ನೀಡಿರಲಿಲ್ಲ. ಹೀಗಾಗಿ ಬೆಳಗ್ಗೆಯಿಂದಲೂ ಖಾಸಗಿ ಬಸ್, ಸಿಟಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿ, ಸಂಚಾರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸರಕಾರಿ ಬಸ್ಸುಗಳು ಬೀದಿಗಿಳಿದಿದ್ದು ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಇನ್ನು ಬಂದ್ ಮಾಡುವಂತೆ ಯಾವುದೇ ಸಂಘಟನೆ ಮತ್ತು ಪಕ್ಷಕ್ಕೆ ಸಂಬಂದಪಟ್ಟವರು ಒತ್ತಡ ಹೇರದ ಕಾರಣ ಬಂದ್ ಬಿಸಿ ಮುಟ್ಟಿಲ್ಲ. ಶಾಲೆ ಪ್ರಾರಂಭೋತ್ಸವ ಒಂದೆಡೆಯಾಗಿದ್ದು ಕಾಲೇಜುಗಳು ಈಗಾಗಲೇ ತೆರೆದಿರುವ ಕಾರಣ ಶಾಲೆ-ಕಾಲೇಜುಗಳು ಮಾಮೂಲಿಯಾಗಿ ನಡೆದಿತ್ತು.

ಜನ ಸಂಚಾರ ಕಮ್ಮಿ..!
ಒಂದೆಡೆ ಬಂದ್ ಎಂಬ ಮಾತುಗಳು. ಇನ್ನೊಂದೆಡೆ ತಡರಾತ್ರಿಯಿಂದ ಸುರಿದ ಬಾರೀ ಮಳೆಯಿಂದಾಗಿ ಸರಕಾರಿ ಕಚೇರಿ, ಕೋರ್ಟ್ ಮೊದಲಾದೆಡೆ ಜನರು ಕಮ್ಮಿ ಇದ್ದರು. ಪೇಟೆ, ಬಸ್ ಸ್ಟಾಂಡ್, ಅಂಗಡಿಗಳಲ್ಲಿಯೂ ಜನರ ಸಂಖ್ಯೆ ಕಮ್ಮಿಯಾಗಿದ್ದು ಕಂಡುಬಂದಿತ್ತು.

ಬಿಗು ಬಂದೋಬಸ್ತ್..
ಯಾವುದೇ ಪ್ರತಿಭಟನೆಗಳಿಗೆ ಮುಂಚಿತವಾಗಿ ಪೊಲೀಸ್ ಅನುಮತಿ ಪಡೆದಿಲ್ಲವಾದರೂ ಕೂಡ ಮುಂಜಾಗ್ರತಾ ಕ್ರಮವಾಗಿ ಕುಂದಾಪುರ ಶಾಸ್ತ್ರಿ ಪಾರ್ಕ್ ಸಮೀಪ ಮೀಸಲು ಪಡೆ ವಾಹನ ನಿಯೋಜಿಸಲಾಗಿತ್ತು. ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Comments are closed.