ಕರಾವಳಿ

ಅಡ್ಯಾರ್ ಬಳಿ ಬಿಜೆಪಿ ವಿಜಯೋತ್ಸವದ ಮೇಲೆ ಕಲ್ಲು ತೂರಾಟ : ಹಲವರಿಗೆ ಗಾಯ :ನಿಷ್ಪಕ್ಷಪಾತ ತನಿಖೆಗೆ ಸಂಸದರ ಆಗ್ರಹ

Pinterest LinkedIn Tumblr

ಮಂಗಳೂರು, ಮೇ 16: ಕರಾವಳಿಯಲ್ಲಿ ಅಭೂತಪೂರ್ವ ಜಯಗಳಿಸಿರುವ ಭಾರತೀಯ ಜನತಾ ಪಾರ್ಟಿಯು ಮಂಗಳವಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದ ಘಟನೆ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್‌ಪದವಿನಲ್ಲಿ ನಡೆದಿದೆ.

ಘಟನೆಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ‌ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳು ಸ್ಥಳೀಯ ದೇವಸ್ಥಾನದ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.ಈ ಸಂದರ್ಭ ಮಂದಿರದ ಬಳಿ ಅಳವಡಿಸಲಾಗಿದ್ದ ಬೋರ್ಡ್‌ಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಮಂಗಳೂರು ಹೊರವಲಯದ ಅಡ್ಯಾರ್ ಪದವು ಮಸೀದಿ ಬಳಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ವಿಷಯಕ್ಕೆ ಸಂಬಂಧಿಸಿ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.

ಮಸೀದಿಯ ಮುಂದೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರಿಂದ ಕೆಲವರು ಅಕ್ಷೇಪ ವ್ಯಕ್ತಪಡಿಸಿ ಘರ್ಷಣೆಗೆ ಮುಂದಾಗಿದ್ದು, ಈ ವೇಳೆ ಮಾತುಕತೆಯು ವಿಕೋಪಕ್ಕೆ ತಿರುಗಿದೆ. ಇದೇ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಅಲ್ಲೆ ಸಮೀಪದಲ್ಲಿದ್ದ ದೇವಸ್ಥಾನದ ಮೇಲೇ ಕಲ್ಲು ತೂರಾಟ ನಡೆಸಿದ್ದಾರೆ. ಮಾತ್ರವಲ್ಲದೇ ಕೆಲವು ಕಿಡಿಗೇಡಿ ಯುವಕರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಸೀದಿಗೆ ಕಲ್ಲೆಸೆತ ಆರೋಪ :

ಇದೇ ವೇಳೆ ಘಟನೆಯಿಂದ ಕೆರಳಿದ ಕಾರ್ಯಕರ್ತರು ಮಸೀದಿಗೆ ಕಲ್ಲೆಸೆದಿದ್ದು, ಗಾಜು ಒಡೆದು ಹಾನಿಯಾಗಿದೆ ಎಂದು ಅರೋಪಿ ಸಲಾಗಿದೆ. ಘಟನೆಯಲ್ಲಿ ಇತ್ತಂಡಗಳ ಅಡ್ಯಾರ್‌ಪದವು ನಿವಾಸಿಗಳಾದ ಅಶೋಕ್, ಅರುಣ್, ಅಭಿಜಿತ್, ಸಫ್ವಾನ್, ವನಜಾಕ್ಷ ಎಂಬವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳು ನಗರದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ :

ಘಟನೆ ಬಳಿಕ ಅಡ್ಯಾರ್‌ಪದವಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ನಳಿನ್ ಕುಮಾರ್ ಆಗ್ರಹ :

ಮಂಗಳೂರಿನ ಹೊರವಲಯದ ಅಡ್ಯಾರ್ ಪದವಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾಗ ನಡೆದ ಅಹಿತಕರ ಘಟನೆಯಿಂದ ಗಂಭೀರ ಗಾಯಗೊಂಡ ಕಾರ್ಯಕರ್ತರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹಾಗೂ ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Comments are closed.