ಕರಾವಳಿ

ಕುಂದಾಪುರ(ವಕ್ವಾಡಿ): ಬೈಕ್ ಮೇಲೆ ಮರ ಬಿದ್ದು ಯುವಕ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಶುಕ್ರವಾರ ತಡರಾತ್ರಿ ಸುರಿದ ಬಾರೀ ಮಳೆ ಹಾಗೂ ಗಾಳಿಗೆ ಧರೆಗುರುಳಿದ ಮರದ ಅಡಿಗೆ ಸಿಲುಕಿದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ವಕ್ವಾಡಿ ನವನಗರ ಎಂಬಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ವಕ್ವಾಡಿ ದೇವಾಡಿಗರ ಬೆಟ್ಟು ರವಿ ದೇವಾಡಿಗ (27) ಮೃತ ಯುವಕ.

ಘಟನೆ ವಿವರ: ಗಾರೆ ಕೆಲಸ ಮಾಡಿಕೊಂಡಿದ್ದ ರವಿ ದೇವಾಡಿಗ ನಿನ್ನೆ ರಾತ್ರಿ ಕಾಳಾವರ ಮಾರ್ಗದಿಂದ ವಕ್ವಾಡಿಯತ್ತ ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸುಮಾರು ೯.೩೦ರಿಂದ ಆರಂಭಗೊಂಡ ಜೋರಾದ ಗಾಳಿ ಮಳೆ ವೇಳೆ ಮರ ನೆಲಕ್ಕುರುಳಿದೆ ಎನ್ನಲಾಗಿದೆ. ಇದು ನಿರ್ಜನ ಪ್ರದೇಶವಾದ ಕಾರಣ ಘಟನೆ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲ. ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಕಂಡ ಸ್ಥಳೀಯರು ಪರಿಶೀಲನೆ ನಡೆಸುವಾಗ ಸಮೀಪದಲ್ಲಿ ಬೈಕ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬೈಕ್ ಸ್ಥಿತಿ ಅವಲೋಕಿಸಿದ ಸ್ಥಳೀಯರು ಏನೋ ಅನಾಹುತ ನಡೆದಿರಬಹುದೆಂದು ಹುಡುಕಾಡಿದಾಗ ಮರದಾಡಿಭಾಗದಲ್ಲಿ ರವಿ ಶವ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರವನ್ನು ಕಟಾವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಪಿಎಸ್ಐ ಹರೀಶ್ ಮೊದಲಾದವರು ಭೇಟಿ ನೀಡಿದ್ದಾರೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Comments are closed.