ಕರಾವಳಿ

ಕುಂದಾಪುರ(ಬೈಂದೂರು): ಸೋದರನನ್ನು ಕೊಂದು ಶವವನ್ನು ಸುಟ್ಟರೇ ಸಹೋದರರು?

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ನಡೆದ ಜಗಳ ಸೋದರನನ್ನು ಬಲಿ ಪಡೆದುಕೊಂಡಿದ್ದು ಕೊಲೆಯ ತರುವಾಯ ಶವವನ್ನು ಕಾಡಿನಲ್ಲಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಕಂಬಳಗದ್ದೆ ಎಂಬಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಮುತ್ತಯ್ಯ ನಾಯ್ಕ್ (35) ಕೊಲೆಯಾದ ವ್ಯಕ್ತಿಯಾಗಿದ್ದಾರೆ.

ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಮುತ್ತಯ್ಯ ನಾಯ್ಕ್ ತಂದೆಯ ಮರಣದ ಬಳಿಕ ಅಂದರೆ ಸುಮಾರು ಆರು ತಿಂಗಳ ಹಿಂದೆ ಗೋಳಿಹೊಳೆಯ ನಿವಾಸಕ್ಕೆ ಆಗಮಿಸಿದ್ದು ವಾಪಾಸ್ ಮುಂಬೈಗೆ ತೆರಳದೇ ಊರಲ್ಲಿಯೇ ಇದ್ದರು. ಯಾವುದೇ ಕೆಲಸ ಕಾರ್ಯ ಮಾಡಿಕೊಂಡಿರದ ಮುತ್ತಯ್ಯ ಕುಡಿತದ ಚಟ ಹೊಂದಿದ್ದು ಹಣಕ್ಕಾಗಿ ವೃದ್ಧ ತಾಯಿಯನ್ನು ಸಹೋದರಿಯರನ್ನು ಪೀಡಿಸುತ್ತಿದ್ದ. ಮನೆಯಲ್ಲಿ ನಿತ್ಯವೂ ಜಗಳ ಮಾಮೂಲಿಯಾಗಿತ್ತು.

ಗುರುವಾರ ರಾತ್ರಿಯೂ ಮನೆಯಲ್ಲಿ ಗಲಾಟೆ ನಡದಿದೆ ಎನ್ನಲಾಗಿದ್ದು ಗಲಾಟೆಯ ನಡುವೆ ಈ ಕೊಲೆ ಸಂಭವಿಸಿದೆ ಎನ್ನಲಾಗುತ್ತಿದೆ. ಬಳಿಕ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಶವವನ್ನು ಮನೆಯಿಂದ ಒಂದೂವರೆ ಕಿಲೋಮಿಟರ್ ದೂರದ ನಿರ್ಜನ ಕಾಡಿನಲ್ಲಿ ಸುಟ್ಟು ಹಾಕಲಾಗಿದೆ ಎನ್ನಲಾಗಿದೆ.

ಅಲ್ಲಿಯೇ ಮರಕಡಿದು ಸುಟ್ಟರು.!
ಮನೆಯಿಂದ ದೂರದಲ್ಲಿರುವ ಗುಡ್ಡದ ತಪ್ಪಲಿನಲ್ಲಿ ನಿರ್ಜನ ಕಾಡಿನ ಸಮೀಪದಲ್ಲಿನ ಅವರಿಗೆ ಸಂಬಂಧಪಟ್ಟ ಜಾಗದಲ್ಲಿ ಶವವನ್ನು ಸಂಪೂರ್ಣ ಸುಟ್ಟು ಹಾಕಲಾಗಿದೆ. ಶವವನ್ನು ಸುಡಲು ಅಲ್ಲಿಯೇ ಸಮೀಪದಲ್ಲಿರುವ ನಾಲ್ಕಾರು ಮರಗಳನ್ನು ಕಡಿದು ಕಟ್ಟಿಗೆ ಮಾಡಿ ಶವ ಸುಟ್ಟಿದ್ದು ಶವ ಸುಟ್ಟ ಅನತಿ ದೂರದಲ್ಲಿ ಹಾರೆ, ಪಿಕ್ಕಾಸೆ, ಗರಗಸ, ಸೀಮೆಎಣ್ಣೆ ಕ್ಯಾನ್ ಮೊದಲಾದವು ಪತ್ತೆಯಾಗಿದೆ.

ಮೂವರು ಸೋದರರ ವಿಚಾರಣೆ..
ಪ್ರಕರಣವನ್ನು ಮುಚ್ಚಿ ಹಾಕುವ ಎಲ್ಲಾ ವ್ಯವಸ್ಥೆಯನ್ನು ಸೋದರರು ಮಾಡಿದ್ದರಾದರೂ ಸಾರ್ವಜನಿಕ ಮಾಹಿತಿಯೊಂದು ಮಾಧ್ಯಮ ಮಂದಿಗೆ ತಿಳಿದಿತ್ತು. ಮಾಧ್ಯಮದವರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದರು. ಬೈಂದೂರು ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂದು ಕಂಡುಬಂದಿದ್ದು ಮುತ್ತಯ್ಯ ಅವರ ಮೂವರು ಸಹೋದರರ ವಿಚಾರಣೆ ನಡೆಸುತ್ತಿದ್ದಾರೆ.

ಬೈಂದೂರು ಪೊಲೀಸರಿಂದ ದುರ್ಗ ನಾಯ್ಕ್, ರಾಘವೇಂದ್ರ ನಾಯ್ಕ್, ಅಣ್ಣಪ್ಪ ನಾಯ್ಕ್ ಎನ್ನುವರ ವಿಚಾರಣೆ ನಡೆಯುತ್ತಿದೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.