ಕರಾವಳಿ

ಸುರತ್ಕಲ್ ಕ್ಷೇತ್ರ : ಸಂಸದ ನಳಿನ್ ಕುಮಾರ್‌ರಿಂದ ಟಿಕೆಟ್ ತಪ್ಪಿತ್ತು ಎಂದು ಆಕ್ರೋಷ ವ್ಯಕ್ತಪಡಿಸಿದ ಮಾಜಿ ಸಚಿವ ಪಾಲೆಮಾರ್

Pinterest LinkedIn Tumblr

ಮಂಗಳೂರು: ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರು ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಭರತ್ ಶೆಟ್ಟಿಯವರನ್ನು ಬಿಜೆಪಿ ವರಿಷ್ಠರು ಘೋಷಣೆ ಮಾಡಿದ್ದು. ತನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಷಯದ ಬಗ್ಗೆ ವಾಹಿನಿಯೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಟಿಕೆಟ್ ಭರವಸೆ ನೀಡಿದ್ದರು. ಎರಡು ದಿನಗಳ ಹಿಂದೆ ಯಡಿಯೂರಪ್ಪ ಕಚೇರಿಯಿಂದಲೇ ಗುರುತಿನ ಚೀಟಿಯನ್ನು ಕೇಳಿದ್ದರು. ಟಿಕೆಟ್ ಭರವಸೆಯ ಹಿನ್ನೆಲೆಯಲ್ಲಿ ಎ. 23 ರಂದು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧರಿಸಿದ್ದೆ ಆದರೆ ಅಭ್ಯರ್ಥಿಗಳ ಘೋಷಣೆ ಆಗುವಾಗ ನನ್ನ ಹೆಸರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾತ್ರವಲ್ಲದೇ ಈ ಸಂಚಿನ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರು ಇರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ ಪಾಲೆಮಾರ್ ಅವರು, ನನಗೆ ಸಿಗಬೇಕಿದ್ದ ಟಿಕೆಟ್ ಅನ್ನು ಸಂಸದ ನಳೀನ್ ಕುಮಾರ್ ಕಟೀಲ್ ತಪ್ಪಿಸಿದ್ದಾರೆ. ನಳಿನ್ ಕುಮಾರ್ ಕಟೀಲ್, ಭರತ್ ಶೆಟ್ಟಿ ಪರವಾಗಿ ವಾದಿಸಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಈ ಮೂಲಕ ನನಗೆ ಮತ್ತು ಕರಾವಳಿಯ ಪಕ್ಷದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಳಿನ್ ಗೆಲುವಿಗಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದೆ. ಆದರೆ ಈಗ ನನಗೇ ದ್ರೋಹ ಮಾಡಿದ್ದಾರೆ” ಎಂದು ಪಾಲೆಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬಂಟ್ಸ್ ಸಮುದಾಯಕ್ಕೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ನೀಡುವ ಮೂಲಕ ಹಿಂದುಳಿದ ವರ್ಗದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಜೈಲಿಗೆ ಹೋಗಲಷ್ಟೆ ಹಿಂದುಳಿದವರು ಬೇಕಾಗುವುದೇ ಎಂದು ಪ್ರಶ್ನಿಸಿದ ಅವರು ಇಂತಹ ನಡೆ ಪಕ್ಷದ ಹಿತಕ್ಕೆ ಮಾರಕ ಎಂದು ಹೇಳಿದ್ದಾರೆ.

ಇದೇ ವೇಳೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದು ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಕೂಡ ಅಸಮಾಧಾನಗೊಂಡಿದ್ದು, ಬೆಂಬಲಿಗರು ಪ್ರತ್ಯೇಕವಾಗಿ ಸಭೆ ಸೇರಿದ್ದಾರೆ. ಪಕ್ಷೇತರ ಸ್ಪರ್ಧೆ ನಡೆಸುವಂತೆ ಒತ್ತಡ ಹಾಕಿದ್ದಾರೆ. ಈ ಮೂಲಕ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ ಎಂದು ಪಾಲೆಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.