ಕರಾವಳಿ

ಚುನಾವಣೆ ಹಿನ್ನೆಲೆ : ಪೂಜಾರಿ ಕಾಲಿಗೆರಗಿ ಆಶೀರ್ವಾದ ಪಡೆದ ರೈ,ಬಾವ,ಲೋಬೋ, ಸೊರಕೆ

Pinterest LinkedIn Tumblr

ಮಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆ ಸಮೀಸುತ್ತಿದ್ದಂತೆ ಅಭ್ಯರ್ಥಿಗಳು ಮತದಾರರ ಓಲೈಕೆ ಜೊತೆ ಪಕ್ಷ ಭೇದ ಮರೆತು ಕೆಲವು ಪ್ರಮುಖರ ಕಾಲಿಗೆರಗಿ ಆಶೀರ್ವಾದ ಪಡೆಯುವುದು ಹಿಂದಿನಿಂದಲೂ ಬಂದಂತಹ ವಾಡಿಕೆ.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಿಂದ ಮೂಲೆಗುಂಪು ಮಾಡಲಾಗಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರ ಕಾಲಿಗೆರಗಿ ಆಶೀರ್ವಾದ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಸಚಿವ ರೈ ಬಳಿಕ ಪೂಜಾರಿ ಕಾಲಿಗೆರಗಿ ಆಶೀರ್ವಾದ ಪಡೆದ ಶಾಸಕ ಸೊರಕೆ :

ಕೆಲವು ದಿನಗಳ ಹಿಂದೆ ಪೂಜಾರಿಯವರ ಬದ್ದ ರಾಜಕೀಯ ವೈರಿ ಎಂದೇ ಖ್ಯಾತಿ ಪಡೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಪೂಜಾರಿಯವರ ಮನೆಗೆ ತೆರಳಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಬಂದ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಅವರು ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ದ.ಕ ಜಿಲ್ಲೆಯ ಬಂಟ್ವಾಳದ ಮನೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಿದ್ದಾರೆ.

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಹಿರಿಯ ಮುಖಂಡರಾಗಿದ್ದು, ಸ್ವಪಕ್ಷದಲ್ಲಿನ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು. ಬಿಲ್ಲವ ಸಮುದಾಯದಿಂದ ಬಂದ ಕಾಂಗ್ರೆಸ್ ಶಾಸಕ ವಿನಯಕುಮಾರ್ ಸೊರಕೆ ಅವರು ಪೂಜಾರಿ ಅವರ ಕಾಲಿಗೆರಗಿದರು, ಅವರಿಗೆ ಪೂಜಾರಿ ಶುಭ ಹಾರೈಸಿದರು ಎಂದು ತಿಳಿದು ಬಂದಿದೆ.

ಪೂಜಾರಿ ಆರೋಗ್ಯ ವಿಚಾರಿಸಿದ ಮೊಹಿಯುದ್ದೀನ್ ಬಾವಾ :

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಅವರನ್ನು ಶುಕ್ರವಾರ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಹಿಯುದ್ದೀನ್ ಬಾವಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಆರೋಗ್ಯ ಸಮಸ್ಯೆ ಇರುವುದರಿಂದ ಪ್ರಚಾರಕ್ಕೆ ಬರಲು ಕಷ್ಟ ಸಾಧ್ಯ. ಕಾಂಗ್ರೆಸ್ ಅಧಿಕಾರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿರುವುದರಿಂದ ಮತ್ತೊಮ್ಮೆ ಜಯಗಳಿಸುತ್ತೀರಿ ಎಂದು ಪೂಜಾರಿಯವರು ಹಾರೈಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಸುನಿಲ್ ಪೂಜಾರಿ ಮುಂತಾದವರು ಈ ವೇಳೆ ಬಾವ ಜತೆಗಿದ್ದರು.

ಪೂಜಾರಿಯವರ ಯೋಗ ಕ್ಷೇಮ ವಿಚಾರಿಸಿ, ಆಶೀರ್ವಾದ ಪಡೆದ ಶಾಸಕ ಜೆ.ಆರ್ ಲೋಬೊ :

ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಜೆ.ಆರ್ ಲೋಬೊರವರು ಶುಕ್ರವಾರ ಹಿರಿಯ ಕಾಂಗ್ರೇಸ್ ಮುಖಂಡ, ಕೇಂದ್ರದ ಮಾಜಿ ಸಚಿವರಾದ ಬಿ. ಜನಾರ್ಧನ ಪೂಜಾರಿರವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಆಶೀರ್ವಾದ ಪಡೆದರು.

Comments are closed.