ಕರಾವಳಿ

ಅತ್ಯಾಚಾರ ಪ್ರಕರಣಕ್ಕೆ ಶಿಕ್ಷೆ: ನ್ಯಾಯಾಧೀಶರೆದುರೇ ಸರಕಾರಿ ಅಭಿಯೋಜಕರಿಗೆ ಶೂ ಎಸೆದ ಅಪರಾಧಿ

Pinterest LinkedIn Tumblr

ಉಡುಪಿ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಉಡುಪಿಯ ಪೋಕ್ಸೋ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿಯೇ ಸರಕಾರಿ ಅಭಿಯೋಜಕರಿಗೆ ಶೂ ಎಸೆದ ಕಳವಳಕಾರಿ ಘಟನೆ ನಡೆದಿದೆ.

ಐದು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಹದಿನೈದರ ಅಪ್ರಾಪ್ತ ತರುಣಿ ಮೇಲೆ ಅತ್ಯಾಚಾರ ನಡೆದಿತ್ತು. ಬಳಿಕ ತನಿಖೆಯಿಂದ ಆರೋಪಿ ಬ್ರಹ್ಮಾವರದ ಪ್ರಶಾಂತ ಕುಲಾಲ್ ಎಂದು ಪತ್ತೆಯಾಗಿತ್ತು. ಈತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನಿಂದ ಈತ ಬಿಡುಗಡೆ ಹೊಂದಿದ್ದು ವಿಚಾರಣೆ ನಡೆಯುತ್ತಿತ್ತು. ಆ ಬಳಿಕವೂ ಈತ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

ಗುರುವಾರ ಸಂಜೆ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ವೇಳೆ ಈತನ ಅಪರಾಧಿ ಹಿನ್ನೆಲೆಯನ್ನು ಉಲ್ಲೇಖಿಸಿದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಅವರು ಈತನಿಗೆ ಕಠಿಣ ಶಿಕ್ಷೆ ನೀಡುವಂತೆ ವಾದಿಸಿದ್ದರು. ಬಳಿಕ ತೀರ್ಪು ನೀಡಿದ ನ್ಯಾಯಾಧೀಶರು ಇಪ್ಪತ್ತು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆ ಕೋಪಗೊಂಡ ಪ್ರಶಾಂತ ತನ್ನ ಎರಡೂ ಕಾಲುಗಳ ಶೂ ತೆಗೆದು ನ್ಯಾಯಾಧೀಶ ರ ಸಮ್ಮುಖ ಇದ್ದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿಯತ್ತ ಎಸೆದಿದ್ದಾನೆ. ಅವರು ಅದೃಷ್ಟವಷಾತ್ ಏಟಿನಿಂದ ತಪ್ಪಿಸಿಕೊಂಡಿದ್ದು, ಇದು ನ್ಯಾಯಾಲಯವನ್ನು ಅವಮಾನಿಸಿದ ಪ್ರಕರಣವಾಗಿದೆ.

ಪ್ರಶಾಂತನ ವಿರುದ್ದ ಈ ಬಗ್ಗೆ ಶುಕ್ರವಾರ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕೋರಿಕೆಯ ಮೇರೆಗೆ ವಿಜಯ ರಾಜು ಪೂಜಾರಿ ಅವರಿಗೆ ಭದ್ರತೆ ನೀಡಲಾಗಿದೆ.

Comments are closed.