ಕರ್ನಾಟಕ

ಕರೆನ್ಸಿ ಪಾರ್ಸಲ್ ಬಂದಿದೆ ಎಂದು ಸುಳ್ಳು ಹೇಳಿ ಶಿಕ್ಷಕಿಯೊಬ್ಬರಿಂದ 7.20 ಲಕ್ಷ ಸುಲಿಗೆ; ದೆಹಲಿಯ ಮೂವರು ಯುವಕರು ಬಂಧನ

Pinterest LinkedIn Tumblr

ಬೆಂಗಳೂರು: ‘ನಿಮಗೆ ಕರೆನ್ಸಿ ಪಾರ್ಸಲ್ ಬಂದಿದೆ’ ಎಂದು ಸುಳ್ಳು ಹೇಳಿ ವಿವಿಧ ಶುಲ್ಕಗಳ ಹೆಸರಿನಲ್ಲಿ ನಗರದ ಶಿಕ್ಷಕಿಯೊಬ್ಬರಿಂದ ₹ 7.20 ಲಕ್ಷ ಸುಲಿಗೆ ಮಾಡಿದ್ದ ದೆಹಲಿಯ ಮೂವರು ಯುವಕರು ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಜರಾಜೇಶ್ವರಿನಗರ ನಿವಾಸಿಯಾದ ಆ ಶಿಕ್ಷಕಿ, ಇದೇ ಜ.26ರಂದು ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದರು. ಆರೋಪಿಗಳ ಬ್ಯಾಂಕ್ ಖಾತೆ ವಿವರ ಹಾಗೂ ಐಪಿ ವಿಳಾಸ ಆಧರಿಸಿ ತನಿಖೆ ಪ್ರಾರಂಭಿಸಿದ ಪೊಲೀಸರು, ದೆಹಲಿಯ ಪ್ರಜಾಪತಿ ಮೊಹಲ್ಲಾ ನಿವಾಸಿ ಜಾನ್ ರಾಜನ್ (27), ಉತ್ತಮ್‌ ನಗರ್‌ನ ಪ್ರಶಾಂತ್‌ ಸಿಂಗ್ (22) ಹಾಗೂ ಕುಸುಮ್‌ಪುರದ ಕೆ.ನಾಗರಾಜ್ (24) ಎಂಬುವರನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.

‘ಬಂಧಿತರು ದೆಹಲಿಯ ‘ಉಜ್ಜೀವನ್’ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿದ್ದು, ಅವುಗಳಲ್ಲಿ ₹ 50 ಸಾವಿರ ಮಾತ್ರ ಇದೆ. ಆ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದೇವೆ. ಮೂವರನ್ನೂ ಶುಕ್ರವಾರ ಬೆಳಿಗ್ಗೆ ನಗರಕ್ಕೆ ಕರೆತರಲಾಗಿದ್ದು, ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂಬ ಬಗ್ಗೆ ತಿಳಿಯಲು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರ್‌ಬಿಐ ಹೆಸರು ದುರ್ಬಳಕೆ: 2017ರ ಜ.16ರಂದು ಶಿಕ್ಷಕಿಗೆ ಕರೆ ಮಾಡಿದ್ದ ಆರೋಪಿಗಳು, ‘ನಾವು ಇಂದಿರಾಗಾಂಧಿ ವಿಮಾನ ನಿಲ್ದಾಣದ ಅಧಿಕಾರಿಗಳು. ಮಾರ್ಷಲ್ ಎಂಬುವರು ನಿಮ್ಮ ವಿಳಾಸಕ್ಕೆ ಪಾರ್ಸೆಲ್‌ ಕಳುಹಿಸಿದ್ದಾರೆ. ಇದನ್ನು ಬಿಡುಗಡೆಗೊಳಿಸಲು ₹ 35,000 ಶುಲ್ಕ ಪಾವತಿಸಬೇಕು’ ಎಂದಿದ್ದರು. ಅದನ್ನು ನಂಬಿದ ಶಿಕ್ಷಕಿ, ಆನ್‌ಲೈನ್ ಮೂಲಕ ಅವರ ಖಾತೆಗೆ ಹಣ ಜಮೆ ಮಾಡಿದ್ದರು.’

‘ಅಷ್ಟು ಸುಲಭವಾಗಿ ಹಣ ಸಿಕ್ಕಿದ್ದರಿಂದ ಮರುದಿನ ಪುನಃ ಕರೆ ಮಾಡಿ, ‘ಪಾರ್ಸೆಲ್‌ನಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಇದೆ. ಹೀಗಾಗಿ, ನೀವು ₹1.10 ಲಕ್ಷ ಕಸ್ಟಮ್ಸ್ ಶುಲ್ಕ ಕಟ್ಟಲೇ‌ಬೇಕು’ ಎಂದಿದ್ದರು. ಶಿಕ್ಷಕಿ ಆ ಮಾತನ್ನೂ ನಂಬಿ ಹಣ ಕಳುಹಿಸಿದ್ದರು. ಹೀಗೆ, ಹಂತ ಹಂತವಾಗಿ ಏಳು ಕಂತುಗಳಲ್ಲಿ ₹ 7.20 ಲಕ್ಷ ಸುಲಿಗೆ ಮಾಡಿದ್ದರು.’

‘ರಿಸರ್ವ್‌ ಬ್ಯಾಂಕ್‌ನ ಇ–ಮೇಲ್ ವಿಳಾಸಕ್ಕೆ ಹೋಲುವಂತೆಯೇ ನಕಲಿ ಮೇಲ್ ವಿಳಾಸ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಶಿಕ್ಷಕಿ ಪ್ರತಿ ಬಾರಿ ಹಣ ಕಳುಹಿಸಿದಾಗಲೂ ‘ನಿಮ್ಮ ಹಣ ಆರ್‌ಬಿಐಗೆ ತಲುಪಿದೆ. ಪಾರ್ಸಲ್ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸಂದೇಶ ಕಳುಹಿಸುತ್ತಿದ್ದರು. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ‘reserve.bank.transfer@post.com’ ಲಿಂಕ್ ಕ್ಲಿಕ್‌ ಮಾಡುವಂತೆಯೂ ತಿಳಿಸಿದ್ದರು. ಹೀಗಾಗಿ, ದೂರುದಾರರಿಗೆ ಯಾವುದೇ ಅನುಮಾನ ಬಂದಿರಲಿಲ್ಲ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

‘ಕೋಡ್ ನೀಡಲು ₹ 8 ಲಕ್ಷ ಕೊಡಿ’: ಶಿಕ್ಷಕಿ ಆ ಲಿಂಕ್ ಕ್ಲಿಕ್ ಮಾಡಿದಾಗ, ‘ಇನ್‌ಕಂ ಟ್ಯಾಕ್ಸ್‌–ಕೋಡ್’ ಕೇಳುತ್ತಿತ್ತು. ಆ ಬಗ್ಗೆ ವಿಚಾರಿಸಲು ಅವರು ಆರೋಪಿಗಳಿಗೆ ಕರೆ ಮಾಡಿದಾಗ, ‘ನೀವು ₹ 8 ಲಕ್ಷ ಕೊಟ್ಟರೆ, ಕೋಡ್ ಹೇಳುತ್ತೇವೆ’ ಎಂದಿದ್ದರು. ಇದರಿಂದ ಕುಪಿತಗೊಂಡ ಶಿಕ್ಷಕಿ, ‘ನನಗೆ ಯಾವ ಪಾರ್ಸಲ್ ಕೂಡ ಬೇಡ. ನನ್ನ ಹಣವನ್ನು ವಾಪಸ್ ಕೊಡಿ’‍ ಎಂದಿದ್ದರು.

ಆ ಕೂಡಲೇ ಅವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ತಾನು ಮೋಸ ಹೋಗಿರುವುದರ ಅರಿವಾಗಿ, ಶಿಕ್ಷಕಿ ಸೈಬರ್ ಠಾಣೆಯ ಮೆಟ್ಟಿಲೇರಿದ್ದರು.

ಪ್ರಮುಖ ಆರೋಪಿ ಬಾರ್ ಸಪ್ಲೈಯರ್

‘ಪಿಯುಸಿ ಓದಿರುವ ರಾಜನ್, ದೆಹಲಿಯ ಮುನಿರ್ಕ ಗ್ರಾಮದ ‘ಹೈಪರ್’ ಬಾರ್‌ನಲ್ಲಿ ಸಪ್ಲೈಯರ್ ಆಗಿದ್ದ. ಪ್ರಶಾಂತ್ ಖಾಸಗಿ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದರೆ, ನಾಗರಾಜ್ ಗಾರೆ ಕೆಲಸ ಮಾಡುತ್ತಿದ್ದ. ಇವರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದ್ದು, ಅದರ ಪತ್ತೆಗೆ ವಿಶೇಷ ತಂಡವೊಂದು ದೆಹಲಿಯಲ್ಲೇ ಬೀಡು ಬಿಟ್ಟಿದೆ’ ಎಂದು ಸೈಬರ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Comments are closed.