ಕರಾವಳಿ

ಚುನಾವಣೆ ಹಿನ್ನೆಲೆ : ಅಪರಾಧ ಚಟುವಟಿಕೆ ತಡೆಗಟ್ಟಲು ಕೇರಳ ಹಾಗೂ ಮಂಗಳೂರು ಪೊಲೀಸ್ ಆಧಿಕಾರಿಗಳ ಸಭೆ

Pinterest LinkedIn Tumblr

ಮಂಗಳೂರು, ಎಪ್ರಿಲ್.12: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಗಡಿ ಪ್ರದೇಶ ಅಪರಾಧ ಚಟುವಟಿಕೆ ತಡೆ ಸಂಬಂಧಿಸಿ ಕೇರಳ ಹಾಗೂ ರಾಜ್ಯದ ಹಿರಿಯ ಪೊಲೀಸ್ ಆಧಿಕಾರಿಗಳ ಸಭೆ ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯಿತು.

ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ರಾಜ್ಯ ಪೊಲೀಸ್ ಇಲಾಖೆ ಭಾರೀ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಚುನಾವಣೆ ಬಂದೋಬಸ್ತಿಗಾಗಿ ರಾಜ್ಯ ಪೊಲೀಸ್ ಪಡೆಯೊಂದಿಗೆ ಕೇಂದ್ರ ಮೀಸಲು ಪೊಲೀಸ್ ಪ್ಲಟೂನ್ ಸೇರಿದಂತೆ ಸೀಮಾ ಸುರಕ್ಷಾ ಬಲ್ ನ ಯೋಧರನ್ನು ನಿಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.ಕೇಂದ್ರ ಮೀಸಲು ಪೊಲೀಸ್ ಪ್ಲಟೂನ್ ಸೇರಿದಂತೆ ಸೀಮಾ ಸುರಕ್ಷಾ ಬಲ್ ನ ಯೋಧರು ಈಗಾಗಲೇ ಜಿಲ್ಲೆಗೆ ಬಂದಿದ್ದು ಈ ಪಡೆಗಳನ್ನು ಅತಿಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲು ಚರ್ಚೆ ನಡೆಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಮತಗಟ್ಟೆಗಳಿಗೆ ಅತಿ ಹೆಚ್ಚು ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.ಚುನಾವಣಾ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಭದ್ರತೆ ಹಾಗೂ ಗಸ್ತು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು, ಆಂತರಿಕ ಭದ್ರತೆ ವಿಭಾಗದ ಅಧಿಕಾರಿಗಳು, ಕರಾವಳಿ ಭದ್ರತಾ ಪೊಲೀಸ್ ಅಧಿಕಾರಿಗಳು, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಸೇರಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಆಧಿಕಾರಿಗಳು ಭಾಗವಹಿಸಿದ್ದರು.

ಮತದಾರರರಿಗೆ ಜಿಲ್ಲಾಡಳಿತದ ವತಿಯಿಂದ ವಾಹನ ವ್ಯವಸ್ಥೆ : ಡಿಸಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೆ ಗೌಡ ಹಾಗೂ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯ ನಕ್ಸಲ್ ಪೀಡಿತ ಪ್ರದೆಶಗಳಾದ ನಾರಾವಿ , ಕುತ್ಲೂರು, ನಾವರ , ಮಲವಂತಿಕೆ, ಕರಿಯಾಳ, ಹಾಗು ದಿಡುಪೆ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಅಲ್ಲಿಯ ಸ್ಥಳೀಯ ಜನರೊಂದಿಗೆ ಚರ್ಚಿಸಿತು. ಮತದಾರರರಿಗೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಕಷ್ಟವಾದಲ್ಲಿ ಅಂತಹ ಪ್ರದೇಶಗಳಲ್ಲಿ ಜಿಲ್ಲಾಡಳಿತದ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

Comments are closed.